By HARISH MAMBADY
ವರ್ಗಾವಣೆ ಹೊಂದಿ ಪರವೂರಲ್ಲಿ ಕೆಲಸಕ್ಕೆಂದು ಹೋಗುವವರಿಗೆ ಊರಿನಲ್ಲಿ ನಡೆಯುವ ಹಬ್ಬಕ್ಕೆ ಪಾಲ್ಗೊಳ್ಳಬೇಕು ಎಂಬ ಆಸೆ ಮೂಡುವುದು ಸಹಜ. ಆದರೆ ಮೈಸೂರು ಮೂಲದ ಈ ಕುಟುಂಬ ಕಾರ್ಯನಿಮಿತ್ತ ಬೇರೆ ಬೇರೆ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದಾಗಲೆಲ್ಲಾ ದಸರಾ ಹಬ್ಬಕ್ಕೆಂದು ಎಲ್ಲಿಗೂ ಹೋಗಿಲ್ಲ. ತಮ್ಮ ಸಂಪ್ರದಾಯ, ಆಚರಣೆಗಳನ್ನು ಮರೆಯದೆ, ಮನೆಯಲ್ಲೇ ಗೊಂಬೆಗಳನ್ನು ಇಟ್ಟು, ಪೂಜಿಸಿ, ಸಾಂಪ್ರದಾಯಿಕವಾಗಿ ಬೊಂಬೆಗಳ ದಸರಾ ಆಚರಿಸುವ ಮೂಲಕ ನವರಾತ್ರಿ ವೈಭವವನ್ನು ಮನೆಯಲ್ಲೇ ಕಣ್ತುಂಬಿಕೊಳ್ಳುತ್ತಿದೆ.
ನಂದಕುಮಾರ್ ಅವರು ಕೆ.ಎನ್.ಆರ್. ಕನ್ಸ್ ಸ್ಟ್ರಕ್ಷನ್ ಕಂಪನಿಯಲ್ಲಿ ಪಿ.ಆರ್.ಒ. ಆಗಿ ಕೆಲಸ ಮಾಡುತ್ತಿದ್ದಾರೆ. ಸಹಜವಾಗಿಯೇ ವರ್ಗಾವಣೆಯಿರುವ ಕೆಲಸವದು. ಸದ್ಯ ನಾಲ್ಕೈದು ವರ್ಷಗಳಿಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡು ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಇದ್ದವರು ಪ್ರಸ್ತುತ ಬಂಟ್ವಾಳದಲ್ಲಿ ಮನೆ ಮಾಡಿಕೊಂಡಿದ್ದಾರೆ. ನಂದಕುಮಾರ್ ಹಾಗೂ ಅವರ ಪತ್ನಿ ಪುಷ್ಪಾ ನಂದಕುಮಾರ್ ಕಳೆದ ಹದಿನೈದು ವರ್ಷಗಳಿಂದ ತಮ್ಮೂರಾದ ಮೈಸೂರಲ್ಲಿ ಇಲ್ಲದೇ ಇದ್ದರೂ ಅದೇ ಅನುಭವವನ್ನು ಗೊಂಬೆಗಳ ದಸರಾ ಆಚರಿಸುವ ಮೂಲಕ ಪಡೆಯುತ್ತಾರೆ.
ಕರಾವಳಿಯ ಜನರು ಮನೆಯಲ್ಲಿ ಬೊಂಬೆಗಳನ್ನು ಇಟ್ಟು ಪೂಜೆ ಮಾಡುವ ಪದ್ಧತಿ ವಿರಳ. ಬಿ.ಸಿ.ರೋಡ್ ನ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ನಂದಕುಮಾರ್ ದಂಪತಿ ಬೊಂಬೆ ಗಳ ಸಂಗ್ರಹ ವಿಸ್ಮಯಕಾರಿಯಾಗಿದೆ.
ಝಗಮಗಿಸುವ ವಿದ್ಯುದ್ದೀಪಾಲಂಕಾರಗಳೊಂದಿಗೆ ತನ್ನ ಮನೆಯಲ್ಲೇ ಇವರು ಗೊಂಬೆಗಳನ್ನು ಸ್ಟ್ಯಾಂಡ್ ಮೂಲಕ ಇಟ್ಟಿದ್ದಾರೆ. ಇವನ್ನು ಮೂರು ವಿಭಾಗಗಳನ್ನಾಗಿಸಿದ್ದಾರೆ. ಮೊದಲನೇ ವಿಭಾಗದಲ್ಲಿ ದೇವದೇವತೆಯರ ದೃಶ್ಯವೈಭವವಿದ್ದರೆ, ಮತ್ತೊಂದರಲ್ಲಿ ದಸರಾ ಮೆರವಣಿಗೆ ಇದೆ. ಇನ್ನೊಂದರಲ್ಲಿ ಕೂಡುಕುಟುಂಬವೊಂದು ಒಟ್ಟಿಗೆ ಹಬ್ಬದೂಟವನ್ನು ಮಾಡುವ ದೃಶ್ಯವಿದೆ.
ದಸರಾ ಮೆರವಣಿಗೆ ಮನೆಯಲ್ಲೇ ಇದೆ:
ಮೈಸೂರು ದಸರಾ ಮೆರವಣಿಗೆ ನೋಡುವುದೇ ಕಣ್ಣಿಗೆ ಹಬ್ಬ. ಮೈಸೂರಿನವರಾದ ನಾವು ದಸರಾ ಸಂದರ್ಭ ಇಲ್ಲೇ ಗೊಂಬೆಗಳನ್ನು ಇಟ್ಟು ಮನೆಯಲ್ಲೇ ನವರಾತ್ರಿ ಆಚರಣೆ ಮಾಡುತ್ತೇವೆ. ಹೀಗಾಗಿ ಅದರ ದೃಶ್ಯವೈಭವವನ್ನು ಮೂಡಿಸಲಾಗಿದೆ. ಆನೆ, ಒಂಟೆ, ಕುದುರೆ ಸಾಲಿನೊಂದಿಗೆ ವಾಹನಗಳು. ಮೈಸೂರಿನ ಸಯ್ಯಾಜಿರಾವ್ ಸರ್ಕಲ್ ನಲ್ಲಿ ಸಾಗುತ್ತಿರುವ ದಸರಾ ಮೆರವಣಿಗೆಯ ದೃಶ್ಯದ ಪ್ರತಿಕೃತಿ ಇಲ್ಲಿದೆ ಎನ್ನುತ್ತಾರೆ ಪುಷ್ಪಾ. ಹತ್ತು ದಿನ ನವರಾತ್ರಿಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಬೊಂಬೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಾರ್ಯನಿಮಿತ್ತ ಹಲವಾರು ಪ್ರದೇಶಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ಸಂಪ್ರದಾಯವನ್ನು ಬಿಟ್ಟಿಲ್ಲ ಎಂದು ಹೇಳುತ್ತಾರೆ ಪುಷ್ಪಾ ನಂದಕುಮಾರ್.
ಪ್ರಾಚೀನತೆ ಸಾರುವ ವಿಗ್ರಹಗಳು:
ತಮ್ಮ ಮನೆ ದೇವರು ಕೃಷ್ಣ, ವಿಘ್ನ ನಿವಾರಕ ಗಣಪತಿ, ವಿಷ್ಣುವಿನ ಹತ್ತು ಅವತಾರಗಳು, ಸಪ್ತಮಾತೃಕೆಯರು, ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಗೊಂಬೆಗಳು, ರಾಮನ ಪಟ್ಟಾಭಿಷೇಕ ಕಾರ್ಯಕ್ರಮದ ಸೀನ್, ನೃತ್ಯಗಾತಿಯರ ಗೊಂಬೆಗಳು, ವೆಂಕಟರಮಣ, ಶ್ರೀದೇವಿ, ಭೂದೇವಿ, ಅಷ್ಟಲಕ್ಷ್ಮೀಯರು, ವಿಷ್ಣುವಿನ ಹತ್ತು ಅವತಾರಗಳು, ಗೌರಿ, ನವದುರ್ಗೆಯರ ಗೊಂಬೆಗಳು ಇಲ್ಲಿವೆ. ಪ್ರತಿದಿನ ನವದುರ್ಗೆಯ ಅವತಾರಗಳನ್ನು ಇಡಲಾಗುತ್ತದೆ. ಮಹಿಷಾಸುರನ ಗೊಂಬೆಯೂ ಇದೆ, ಚಾಮುಂಡಿ ಮಹಿಷನನ್ನು ಕೊಲ್ಲುವ ದೃಶ್ಯವೂ ಕಾಣಸಿಗುತ್ತದೆ. ಪಟ್ಟದ ಗೊಂಬೆ ಎಂದು ಹೇಳಲಾಗುವ ಮರದ ಗೊಂಬೆಗಳನ್ನು ಸಂಪ್ರದಾಯದ ಪ್ರಕಾರ ಇಡಲಾಗಿದೆ. ಅದರ ಅಕ್ಕಪಕ್ಕ ಲಕ್ಷ್ಮೀ ಸರಸ್ವತಿ ಗೊಂಬೆಗಳು ಇವೆ. ಇದರಲ್ಲಿ ಹಿಂದಿನ ಕಾಲದ ಮದುವೆ ಸಂಪ್ರದಾಯ, ತೊಟ್ಟಿಲು ಇರುವ ದೃಶ್ಯಗಳಿವೆ. ಶ್ರೀಕೃಷ್ಣ ವಿವಿಧ ಭಕ್ಷ್ಯಭೋಜನಗಳನ್ನು ಹಾಕಿಕೊಂಡು ಊಟ ಮಾಡುವ ದೃಶ್ಯಗಳು ಇಲ್ಲಿವೆ. ಅಲ್ಲದೆ, ಸಂಗೀತಗಾರರು, ವಾದ್ಯಗೋಷ್ಠಿ ಇಲ್ಲಿದೆ.
ಕೂಡುಕುಟುಂಬದ ಭೋಜನ ವ್ಯವಸ್ಥೆ:
ಪುಷ್ಪಾ ನಂದಕುಮಾರ್ ಮನೆಯ ಊಟದ ಟೇಬಲ್ ಈಗ ಕೂಡುಕುಟುಂಬದ ಭೋಜನದ ದೃಶ್ಯಗಳನ್ನು ಒಳಗೊಂಡಿದೆ. ಇಲ್ಲಿರುವ ಕೌಟುಂಬಿಕ ವಾತಾವರಣದಲ್ಲಿ ಊಟ, ಅಡುಗೆಮನೆ, ಹಣ್ಣು, ತರಕಾರಿಗಳು, ಧವಸ ಧಾನ್ಯಗಳನ್ನು ಸಂಕೇತಿಸುವ ಬೊಂಬೆಗಳ ಚಿತ್ರಣ ಇಲ್ಲಿದೆ. ಈಗಿನ ಕಾಲದಲ್ಲಿ ಕುಟುಂಬದವರೆಲ್ಲರೂ ಒಟ್ಟಾಗಿ ಹಬ್ಬದಡುಗೆ ಮಾಡಿ ಊಟ ಮಾಡುವ ಪದ್ಧತಿ ಕಡಿಮೆ. ಹೀಗಾಗಿ ಇದನ್ನು ಜೋಡಿಸಿಡಲಾಗಿದೆ ಎಂದು ಪುಷ್ಪಾ ನಂದಕುಮಾರ್ ಹೇಳಿದರು.
Be the first to comment on "ಮೈಸೂರಲ್ಲಿಲ್ಲದಿದ್ರೂ ಮನೇಲೆ ದಸರಾ ವೈಭವ"