ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳು ಬಂಟ್ವಾಳದಲ್ಲಿವೆ. ಎರಡಕ್ಕೂ ಅಧಿಕಾರಿ ಠಾಣಾ ನಿರೀಕ್ಷಕರು ಅಂದರೆ ಇನ್ಸ್ ಪೆಕ್ಟರ್. ಬಂಟ್ವಾಳದ ಮಟ್ಟಿಗೆ ಎರಡೂ ಠಾಣೆಗಳಲ್ಲಿ ಹುದ್ದೆ ಖಾಲಿ ಇದೆ.
ರಾಜ್ಯ ಗುಪ್ತ ವಾರ್ತೆಗೆ ನೇಮಕಗೊಂಡ ಮೇಲೆ ಕಳೆದ ತಿಂಗಳು ಬಂಟ್ವಾಳ ನಗರ ಠಾಣೆಯ ಇನ್ಸ್ ಪೆಕ್ಟರ್ ವಿವೇಕಾನಂದ ರಿಲೀವ್ ಆದ ಮೇಲೆ ಇಲ್ಲಿಗೆ ಯಾರೂ ಬಂದೇ ಇಲ್ಲ.
ಇನ್ನು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಟಿ.ಡಿ. ನಾಗರಾಜ್ ಅವರು ಕಾರ್ಕಳ ಠಾಣೆಗೆ ತೆರಳಿ ಅಲ್ಲಿ ಅಧಿಕಾರ ಸ್ವೀಕರಿಸಿ ವರ್ಷವಾಗುತ್ತಾ ಬಂತು. ಅಲ್ಲಿಗೂ ಯಾರೂ ನಿರೀಕ್ಷಕರೇ ಇಲ್ಲ.
ಸದ್ಯ ವಿಟ್ಲ ಪೊಲೀಸ್ ಠಾಣೆಯ ಜೊತೆಗೆ ಬಂಟ್ವಾಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆ ಎರಡು ಠಾಣೆಗಳ ಹೆಚ್ಚುವರಿ ಅಕಾರವನ್ನು ವಿಟ್ಲ ಇನ್ಸ್ ಪೆಕ್ಟರ್ ಎಚ್.ನಾಗರಾಜ್ ಅವರಿಗೆ ವಹಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಿರುವ ಪೊಲೀಸ್ ಠಾಣೆಗಳು ಇವು:
ಸುಮಾರು ಆರು ವರ್ಷಗಳ ಹಿಂದೆ ಸತತ ಮೂರು ತಿಂಗಳು ಸೆ.೧೪೪ರನ್ವಯ ನಿಷೇಧಾಜ್ಞೆ ವಿಸಲ್ಪಟ್ಟ ಪ್ರದೇಶ ಬಂಟ್ವಾಳ. ಬಂಟ್ವಾಳದ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಕೋಮುಸೂಕ್ಷ್ಮಾತಿಸೂಕ್ಷ್ಮ ಜಾಗಗಳಿವೆ.
ಯಾವುದೇ ಕ್ಷಣದಲ್ಲಿ ಅಸಹನೆಯ ಕಿಡಿ ಹಚ್ಚಿ ಗಲಭೆ ಸೋಟಗೊಳ್ಳುವಂಥ ಸನ್ನಿವೇಶಗಳು ಉದ್ಭವವಾಗುವ ಜಾಗಗಳೂ ಇಲ್ಲಿವೆ ಎಂಬುದು ಹಿಂದಿನ ಉದಾಹರಣೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಇಂಥ ಸನ್ನಿವೇಶದಲ್ಲಿ ಬಂಟ್ವಾಳದ ಪೊಲೀಸ್ ಇಲಾಖೆಯನ್ನು ಸದೃಢಗೊಳಿಸುವ ಉದ್ದೇಶದಿಂದ ಹಿಂದಿನಂತೆ ಇಡೀ ತಾಲೂಕನ್ನು ವೃತ್ತ ಎಂದು ಪರಿಗಣಿಸಿ ಸರ್ಕಲ್ ಇನ್ಸ್ ಪೆಕ್ಟರ್ ಒಬ್ಬರನ್ನೇ ನೇಮಿಸುವ ಬದಲು, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ ಮತ್ತು ವಿಟ್ಲ ಪೊಲೀಸ್ ಠಾಣೆಗಳಿಗೆ ಪ್ರತ್ಯೇಕವಾಗಿ ಇನ್ಸ್ ಪೆಕ್ಟರ್ ಗಳ ಒಟ್ಟು 3 ಹುದ್ದೆಗಳನ್ನು ಸೃಜಿಸಲಾಗಿತ್ತು. ಈ ಹುದ್ದೆಗಳಲ್ಲಿ ಗ್ರಾಮಾಂತರಕ್ಕೆ ಟಿ.ಡಿ.ನಾಗರಾಜ್, ನಗರಕ್ಕೆ ಚೆಲುವರಾಜು ಮತ್ತು ವಿಟ್ಲಕ್ಕೆ ನಾಗರಾಜ್ ಎಚ್.ಇ. ಅವರನ್ನು ನೇಮಿಸಲಾಗಿತ್ತು. ಅವರ ಪೈಕಿ ನಗರ ಠಾಣಾ ಇನ್ಸ್ ಪೆಕ್ಟರ್ ವರ್ಗಾವಣೆಯಾಗಿ ಹಿಂದೆ ಇಲ್ಲೇ ಎಸ್.ಐ. ಆಗಿದ್ದ ವಿವೇಕಾನಂದ ಆಗಮಿಸಿದ್ದರು. ಈ ಮಧ್ಯೆ, ಗ್ರಾಮಾಂತರದ ಟಿ.ಡಿ.ನಾಗರಾಜ್ ಅವರು ಕಾರ್ಕಳಕ್ಕೆ ವರ್ಗ ಹೊಂದಿದ ಬಳಿಕ ಅಲ್ಲಿ ಹುದ್ದೆ ಖಾಲಿಯಾಯಿತು. ಇದೀಗ ವಿವೇಕಾನಂದ ವರ್ಗಾವಣೆ ಬಳಿಕ ನಗರ ಠಾಣೆಯಲ್ಲೂ ಹುದ್ದೆ ಖಾಲಿ. ಈಗಾಗಲೇ ಅಪರಾಧ ಪ್ರಕರಣಗಳು ಜಾಸ್ತಿ ನಡೆಯುವ ಜಾಗ ಎಂದೇ ಹೇಳಲಾಗುವ ವಿಟ್ಲದಲ್ಲಿರುವ ನಾಗರಾಜ್ ಅವರಿಗೆ ಹೆಚ್ಚುವರಿ ಹೊರೆ.
Be the first to comment on "ಸದಾ ಟೆನ್ಶನ್ ಇರುವ ಬಂಟ್ವಾಳದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆಯೇ ಖಾಲಿ!!"