ಮನೆ ಮನೆಯಲ್ಲೂ ಭಗವಂತನ ನಾಮಸ್ಮರಣೆಯಿಂದ ಸಂಪತ್ತು ಒದಗುತ್ತದೆ, ದೇವಸ್ಥಾನಗಳ ಅಭಿವೃದ್ಧಿಯಿಂದ ಜನರು, ಊರಿನ ಅಭಿವೃದ್ಧಿಯಾಗುತ್ತದೆ ಎಂದು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದಜಿ ಹೇಳಿದರು.
ಭಾನುವಾರ ಬಿ.ಸಿ.ರೋಡ್ ಪೊಲೀಸ್ ಲೇನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಲಯ ಉದ್ಘಾಟನೆ, ನಿಧಿ ಸಮರ್ಪಣೆ, ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ಕ್ಷೇತ್ರದ ನೂತನ ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಅವರು ಆಶೀರ್ಚನ ನೀಡಿದರು.
ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರದಲ್ಲಿ ಆಧ್ಯಾತ್ಮಿಕ ಸಾಧನೆಯ ಜತೆಗೆ ಲಕ್ಷ್ಮೀಯನ್ನು ಒಲಿಸಿಕೊಳ್ಳುವ ಅಗತ್ಯವಿದ್ದು, ಪ್ರತಿ ಮನೆ ಮನೆಯಲ್ಲೂ ಭಗವಂತನ ಜಪ ನಡೆದಾಗ ಸಂಪತ್ತು ತನ್ನಿಂತಾನೆ ಹರಿದು ಬರುತ್ತದೆ ನಮ್ಮೊಳಗಿನ ವೈರತ್ವವನ್ನು ದೂರ ಮಾಡಿ ಪ್ರೀತಿ ಬೆಳೆಸುವ ಕಾರ್ಯ, ನಮ್ಮ ಉದ್ಧಾರದ ಜತೆಗೆ ಜಗತ್ತಿನ ಕಲ್ಯಾಣವೂ ಆಗಬೇಕಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ನ್ಯಾಯವಾದಿ ಅಶ್ವನಿಕುಮಾರ್ ರೈ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಹರೀಶ್ ಎಂ.ಆರ್. ವೆಬ್‌ಸೈಟ್ ಅನಾವರಣಗೊಳಿಸಿದರು. ಆಡಳಿತ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಸ್ತಾವನೆಗೈದು ಮುಂದಿನ ದಿನಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷರು ವಹಿಸಿದ್ದರು.
ಬಿ.ಸಿ.ರೋಡು ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಲೋಕನಾಥ ಶೆಟ್ಟಿ, ಶ್ರೀ ರಕ್ತೇಶ್ವರೀ ಸನ್ನಿಧಿ ಅಧ್ಯಕ್ಷ ಬಿ.ವಿಶ್ವನಾಥ್, ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಮಾದಕಟ್ಟೆ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಆನಂದ, ಕೇಪು ಗೌಡ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬಿ.ಸಂಜೀವ ಪೂಜಾರಿ ವಂದಿಸಿದರು. ಪೊಲೀಸ್ ಸಿಬಂದಿ ವಿವೇಕ್ ರೈ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಾಲಯ ಉದ್ಘಾಟನೆ"