ಬಂಟ್ವಾಳ: ಅಮ್ಮುಂಜೆಯಲ್ಲಿ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಜ್ಞಾನ ಫಲ್ಗುಣಿಯನ್ನು ಜುಲೈ 15ರಂದು ಬಿ.ಸಿ.ರೋಡ್ ಕೈಕುಂಜೆಯಲ್ಲಿರುವ ಬಂಟ್ವಾಳ ಕನ್ನಡ ಭವನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳದನ ಸ್ವಾಗತ ಸಮಿತಿ ಮತ್ತು ಸಾಹಿತ್ಯ ಪರಿಷತ್ತು ಏರ್ಪಡಿಸುವ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಬಾಲಕೃಷ್ಣ ಗಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ದೀಪ ಪ್ರಜ್ವಲನ ಮಾಡುವರು. ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ.ಮಂಜಯ್ಯ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಪ್ರಮುಖರಾದ ಗುಂಡಿಲಗುತ್ತು ಶಂಕರ ಶೆಟ್ಟಿ, ಲುವಿಝ ಕುಟಿನ್ಹೊ, ಅಬ್ದುಲ್ ರಝಾಕ್ ಅನಂತಾಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 2 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಅರ್ಥಧಾರಿಗಳಿಂದ ‘ಶರಸೇತು ಬಂಧನ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಜಬ್ಬಾರ್ ಸಮೋ, ದಿನೇಶ್ ಶೆಟ್ಟಿ ಅಳಿಕೆ, ಸಂಕಪ್ಪ ಶೆಟ್ಟಿ ಬಿ.ಸಿ.ರೋಡ್ ಅರ್ಥಧಾರಿಗಳಾಗಿ, ಮುಳಿಯಾಲ ಗಿರೀಶ್ ಭಟ್, ಜಯರಾಮ ಪಡ್ರೆ, ವೆಂಕಟೇಶ ಶೆಟ್ಟಿ ಮೂರ್ಜೆ ಮತ್ತು ಜಗದೀಶ ಮಂಗಲ್ಪಾಡಿ ಹಿಮ್ಮೇಳದಲ್ಲಿ ಭಾಗವಹಿಸುವರು. ಬಳಿಕ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Be the first to comment on "ಬಂಟ್ವಾಳ ಕನ್ನಡ ಭವನದಲ್ಲಿ ಜುಲೈ 15ರಂದು ಸಮ್ಮೇಳನ ಸ್ಮರಣ ಸಂಚಿಕೆ ‘ಜ್ಞಾನ ಫಲ್ಗುಣಿ’ ಬಿಡುಗಡೆ"