ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರವೂ ಮಳೆ ಮುಂದುವರಿದಿದೆ. ಜಿಲ್ಲೆಯ ಹಲವೆಡೆ ಸಣ್ಣಪುಟ್ಟ ಹಾನಿಗಳೂ ಸಂಭವಿಸಿದ್ದು, ವಾತಾವರಣವೂ ತಂಪಾಗಿದೆ.
ದಿನವಿಡೀ ಉತ್ತಮ ಮಳೆಯಾದ ಕಾರಣ ಮಂಗಳವಾರ ಬಂಟ್ವಾಳ ತಾಲೂಕಿನಾದ್ಯಂತ ತಂಪಾದ ವಾತಾವರಣವಿದ್ದರೆ, ಕೆಲವೆಡೆ ಹಾನಿಗಳೂ ಸಂಭವಿಸಿತು. ಸೋಮವಾರ ಗಡಿಯಾರ ಎಂಬಲ್ಲಿ ಶಾಲೆಯೊಂದರ ಬಳಿ ಮಣ್ಣು ಕುಸಿತ ಸಂಭವಿಸಿದ ಘಟನೆಗೆ ಸಂಬಂಧಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಯೂ ಆರಂಭಗೊಂಡಿದ್ದು, ಹೆಚ್ಚಿನ ಅಪಾಯ ತಪ್ಪಿದೆ.
ತುಂಬೆ ಗ್ರಾಮದ ಪದ್ಮನಾಭ ಎಂಬವರ ತಡೆಗೋಡೆ ಕುಸಿದು ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕೇಪು ಗ್ರಾಮದ ಕೋಡಂದೂರು ಜಯರಾಮ ನಾಯ್ಕ ಅವರ ತೋಟದಲ್ಲಿ ಮರಬಿದ್ದು ಅಡಿಕೆ ಮರಗಳಿಗೆ ಹಾನಿಯಾಗಿದೆ. ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಓಟೆಪಡ್ಪು ಎಂಬಲ್ಲಿ ನಾರಾಯಣ ನಾಯ್ಕ ಅವರ ಕೊಟ್ಟಿಗೆಗೆ ಗುಡ್ಡ ಕುಸಿದು ಹಾನಿಯಾಗಿದೆ. ಸಜಿಪಮೂಡದಲ್ಲಿ ಸೈನಾಜ್ ಎಂಬವರ ಮನೆಯಲ್ಲಿ ಶೌಚಾಲಯದ ಶೀಟ್ ಗೆ ಹಾನಿಯಾಗಿದೆ. ಅಪಾಯದ ಮಟ್ಟ 8.5 ಮೀಟರ್ ನಲ್ಲಿ ಹರಿಯುವ ನೇತ್ರಾವತಿ ನದಿ ಅಷ್ಟು ತಲುಪಬೇಕಾದರೆ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿತು ನೀರಿನ ಸೆಲೆ ಜಾಸ್ತಿಯಾಗಬೇಕು. ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ಮಂಗಳವಾರ 3.2 ಮೀಟರ್ ಇತ್ತು.
ಬಿಸಿರೋಡು- ಅಡ್ಡಹೊಳೆವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಪಕ್ಕದಲ್ಲೇ ರಸ್ತೆ ಬದಿಯ ಮಣ್ಣು ಜರಿದು ಶಾಲೆ ಹಾಗೂ ವಿದ್ಯುತ್ ಟವರ್ ಬೀಳುವ ಸ್ಥಿತಿಯಲ್ಲಿ ಸೋಮವಾರ ಕಂಡುಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗುತ್ತಿಗೆದಾರ ಕಂಪನಿ ಸಿಬಂದಿ ಹಾಗೂ ಶಾಲಾಭಿವೃದ್ದಿ ಸಮಿತಿ ಮತ್ತು ಗ್ರಾಮಸ್ಥರ ಜೊತೆಯಲ್ಲಿ ತುರ್ತು ಸಭೆ ನಡೆದಿತ್ತು. ಸಭೆಯಲ್ಲಿ ಮಾಡಿದ ನಿರ್ಣಯದಂತೆ ಕಾಮಗಾರಿ ಆರಂಭಿಸಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿತ್ತು. ಇದೀಗ ಕಾಮಗಾರಿ ಆರಂಭಗೊಂಡಿದೆ.
Be the first to comment on "ಬಂಟ್ವಾಳದಲ್ಲಿ ಮುಂದುವರಿದ ಮಳೆ, ಹಲವೆಡೆ ಹಾನಿ – ದಕ್ಷಿಣ ಕನ್ನಡ ಜಿಲ್ಲೆಯ ಇತರೆಡೆಯೂ ಮಳೆಯ ಸದ್ದು"