ಕಲ್ಲಡ್ಕದ ಡಾ. ಚಂದ್ರಶೇಖರ್ ಅವರ ಮಾದರಿ ಕಾರ್ಯ: ಜಲಸಂರಕ್ಷಣೆಗೆ ಹೀಗೂ ಒಂದು ಉಪಾಯ – ಮಳೆ ನೀರನ್ನೇ ಮರುಬಳಕೆ ಮಾಡೋದು ಹೇಗೆ?

ಇಂದು ಸರಕಾರ ಯಾವ್ಯಾವ ಮೂಲಗಳಿಂದ ನೀರನ್ನು ಹಿಡಿದಿಟ್ಟುಕೊಳ್ಳಬಹುದು ಎಂಬ ಚಿಂತನೆಯಲ್ಲಿ ತೊಡಗಿದ್ದರೆ, ಕಲ್ಲಡ್ಕದ ಪ್ರಸಿದ್ಧ ವೈದ್ಯ ಡಾ. ಚಂದ್ರಶೇಖರ್ ಮತ್ತವರ ಪತ್ನಿ ಕಳೆದ ಹನ್ನೆರಡು ವರ್ಷಗಳಲ್ಲಿ ಮಳೆನೀರು ಸಂಗ್ರಹಿಸುವ ಮೂಲಕ ಜಲಾಂದೋಲನ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ನೇಲ್ಯಾರು ಗೋವಿಂದ ಭಟ್ಟರು ನನಗೆ ಪ್ರೇರಣೆ ಎನ್ನುತ್ತಾರೆ ಡಾ.ಚಂದ್ರಶೇಖರ್. ಅವರ ಮನೆಗೆ ಹೋಗಿದ್ದಾಗ, ಮಹಡಿಗೆ ಬೀಳುವ ನೀರನ್ನು ಸಂಗ್ರಹಿಸುವುದನ್ನು ಕಂಡಿದ್ದ ಚಂದ್ರಶೇಖರ್, ತನ್ನ ಮನೆಯಲ್ಲೂ ಯಾಕೆ ಈ ಪ್ರಯೋಗ ಮಾಡಬಾರದು ಅಂದುಕೊಂಡರು. ಹಾಗೆ ಪರಿಚಯದವರನ್ನು ಸಂಪರ್ಕಿಸಿ ಮಳೆ ನೀರು ಸಂಗ್ರಹಿಸುವ ಕಾರ್ಯಕ್ಕೆ ಕೈ ಹಾಕಿದರು. ಇದು ನಡೆದದ್ದು ಹನ್ನೆರಡು ವರ್ಷಗಳ ಹಿಂದೆ.

’ಮಳೆ ನೀರು ಸಂಗ್ರಹಿಸಬೇಕಾದರೆ ನೀರು ಬೀಳುವುದನ್ನು ಹಿಡಿದಿಟ್ಟುಕೊಳ್ಳಬೇಕು. ಹಾಗೆ ಮಾಡಲು ಸುಲಭ ವಿಧಾನ ಮನೆ ಮಹಡಿಯಿಂದ ಬೀಳುವ ನೀರು. ಮಳೆಗಾಲ ಆರಂಭದ ಮೊದಲ ವಾರ ಮಹಡಿಯಲ್ಲಿರುವ ಕೊಳೆಯೇ ನೀರಿನಲ್ಲಿರುತ್ತದೆ. ಅದಾದ ಬಳಿಕ ಸ್ವಚ್ಛ ನೀರು ದೊರಕಲು ಆರಂಭವಾಗುತ್ತದೆ.’ ಮಳೆ ನೀರು ಸಂಗ್ರಹಿಸುವುದು ಕಷ್ಟವೇನಲ್ಲ. ಇಲ್ಲಿರುವುದು ಮೂರೇ ಮೂರು ಸರಳ ಪ್ರಕ್ರಿಯೆಗಳು. ಮೊದಲನೇಯದ್ದು, ಮಹಡಿಯಲ್ಲಿ ಬಿದ್ದ ನೀರು ಪೈಪ್ ಮೂಲಕ ಕೆಳಗೆ ಬರುತ್ತದೆ. ಎರಡನೆಯ ಪ್ರಕ್ರಿಯೆ ನೀರು ಶುದ್ಧೀಕರಣ. ಶುದ್ಧೀಕರಣ ಹೀಗಿರುತ್ತದೆ. ಜಲ್ಲಿ, ಇದ್ದಿಲು, ಹೊಯ್ಗೆ ಮೂಲಕ ನೀರನ್ನು ಹಾಯಿಸಲಾಗುತ್ತದೆ. ಆ ನೀರಿನಲ್ಲಿ ಕಲ್ಮಶಗಳಿದ್ದರೆ ಅವೆಲ್ಲವೂ ಫಿಲ್ಟರ್ ಆಗುತ್ತದೆ. ಮೂರನೆಯದ್ದು, ಶುದ್ಧಗೊಂಡ ನೀರು ಟ್ಯಾಂಕಿಯೊಳಗೆ ಸೇರುತ್ತದೆ.’ ಎಂದು ಡಾಕ್ಟರ್ ಹೇಳುತ್ತಾರೆ.

ಡಾಕ್ಟರ್ ಮಾಡಿದ್ದೂ ಹೀಗೆ.  ತಮ್ಮ ಅನುಕೂಲಕ್ಕೆ ತಕ್ಕಂತೆ ಪೈಪ್ ಅಳವಡಿಸಿ, ಮಳೆ ನೀರನ್ನು ಹಾಯಿಸಿ, ಬಳಿಕ ಫಿಲ್ಟರ್ ಮಾಡುವ ವ್ಯವಸ್ಥೆ ಮಾಡಿದರು. ಅಲ್ಲಿಂದ ನೀರನ್ನು ಸಂಪ್ ಮಾದರಿಯ ಟ್ಯಾಂಕಿಯಲ್ಲಿ ಹಿಡಿದಿಟ್ಟರು. ಅವರ ಮನೆಯಲ್ಲಿರುವ ನೀರು ಸಂಗ್ರಹದ ಟ್ಯಾಂಕಿ 10.5 ಅಡಿ ವ್ಯಾಸ ವಿಸ್ತೀರ್ಣದಲ್ಲಿದೆ. ನೆಲದಡಿಯಲ್ಲಿರುವ ಕಾರಣ ಜಾಗ ಉಳಿತಾಯವೂ ಆಗುತ್ತದೆ. ಇಲ್ಲಿ 26,000 ಲೀಟರ್ ನೀರು ಸಂಗ್ರಹವಾಗುತ್ತದೆ. ದಿನವೊಂದಕ್ಕೆ 50 ರಿಂದ 60 ಲೀಟರ್ ನೀರು ನಮಗೆ ಬೇಕಾಗುತ್ತದೆ ಎನ್ನುತ್ತಾರೆ ಅವರು. ಈ ನೀರನ್ನು ಕುಡಿಯಲು, ಅಡುಗೆ ಸಹಿತ ದಿನಬಳಕೆಗೆ ಉಪಯೋಗಿಸುತ್ತಾರೆ.  ಜೂನ್ ತಿಂಗಳ ಮೊದಲ ವಾರದಿಂದ ಮಳೆನೀರು ಸಂಗ್ರಹ ಆರಂಭ. ಮೊದಲ ಕೆಲದಿನ ನೀರು ಸಂಗ್ರಹಿಸುವುದಿಲ್ಲ. ಮಳೆ ಸರಾಗವಾಗಿ ಬೀಳಲು ಆರಂಭವಾದೊಡನೆ ಸಂಗ್ರಹ ಶುರು. ಅಲ್ಲಿಂದ ಮಳೆಗಾಲ ಮುಗಿಯುವವರೆಗೆ ಅಂದರೆ ನವೆಂಬರ್ ವರೆಗೂ ನೀರನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಶೇಖರಿಸಿದ ನೀರನ್ನು ಮುಂದಿನ ವರ್ಷ ಮೇ ವರೆಗೆ ಉಪಯೋಗಿಸುತ್ತೇವೆ. ಯಾವ ಸಮಸ್ಯೆಯೂ ಆಗಿಲ್ಲ ಎನ್ನುತ್ತಾರೆ ವೈದ್ಯರು.

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಕಲ್ಲಡ್ಕದ ಡಾ. ಚಂದ್ರಶೇಖರ್ ಅವರ ಮಾದರಿ ಕಾರ್ಯ: ಜಲಸಂರಕ್ಷಣೆಗೆ ಹೀಗೂ ಒಂದು ಉಪಾಯ – ಮಳೆ ನೀರನ್ನೇ ಮರುಬಳಕೆ ಮಾಡೋದು ಹೇಗೆ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*