ವಿಧಾನಸಭೆಯ 8 ಕ್ಷೇತ್ರಗಳಿಗೆ (DAKSHINA KANNADA) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಶೇ.75.87 ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ಚುನಾವಣಾ ಆಯೋಗ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ, ಒಟ್ಟು 13,51,582 ಮಂದಿ ಮತ ಚಲಾಯಿಸಿದ್ದಾರೆ. ಇವರ ಪೈಕಿ 6,58,761 ಪುರುಷರು, 6,92,803 ಮಹಿಳೆಯರು ಮತ್ತು 18 ತೃತೀಯ ಲಿಂಗಿಗಳು ಮತದಾನದ ಹಕ್ಕು ಚಲಾಯಿಸಿದ್ದಾರೆ ವಿವರಗಳಿಗೆ ಮುಂದೆ ಓದಿರಿ.
ಬೆಳ್ತಂಗಡಿ ಗರಿಷ್ಠ, ಮಂಗಳೂರು ದಕ್ಷಿಣ ಕನಿಷ್ಠ: ಮತ ಚಲಾವಣೆ ಶೇಕಡಾವಾರುಗಳ ಪೈಕಿ, (BELTHANGADY) ಬೆಳ್ತಂಗಡಿ ಗರಿಷ್ಠ ಮತ್ತು ಮಂಗಳೂರು ದಕ್ಷಿಣ ಕನಿಷ್ಠ ಮತದಾನವಾಗಿದೆ. ಬೆಳ್ತಂಗಡಿಯಲ್ಲಿ ಒಟ್ಟು 183843 ಮಂದಿ ಮತ ಚಲಾಯಿಸಿದ್ದು, ಶೇ.80.33 ಮತದಾನವಾಗಿದೆ. ( BANTWAL ) ಬಂಟ್ವಾಳದಲ್ಲಿ 1,83,326 ಮಂದಿ ಮತ ಚಲಾಯಿಸಿದ್ದು, 80.27 ಶೇಕಡಾ ಮತದಾನವಾಗಿದೆ. ಮಂಗಳೂರು ಉತ್ತರದಲ್ಲಿ 1,78,574 ಮತದಾನವಾಗಿದ್ದು, ಶೇ.71.6 ಮತದಾನವಾಗಿದೆ. ಪುತ್ತೂರಿನಲ್ಲಿ 1,70,002 ಮತ ಚಲಾಯಿಸಿದ್ದು, ಶೇ.79.91 ಮತದಾನವಾಗಿದೆ. ಸುಳ್ಯದಲ್ಲಿ 1,61,788 ಮತ ಚಲಾಯಿಸಿದ್ದು, ಶೇ.79.53 ಮತದಾನವಾಗಿದೆ. ಮಂಗಳೂರು (ಉಳ್ಳಾಲ)ದಲ್ಲಿ 1,58,728 ಮತ ಚಲಾಯಿಸಿದ್ದು, ಶೇ.77.38 ಮತದಾನವಾಗಿದೆ. ಮೂಡುಬಿದಿರೆಯಲ್ಲಿ 1,55,847 ಮತ ಚಲಾಯಿಸಿದ್ದು, ಶೇ.78 ಮತದಾನವಾಗಿದೆ. ಮಂಗಳೂರು ದಕ್ಷಿಣದಲ್ಲಿ 1,59,474 ಮಂದಿ ಮತ ಚಲಾಯಿಸಿದ್ದು, ಶೇ.64.89 ಮತದಾನವಾಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, ಪ್ರತೀ ಮತಗಟ್ಟೆಗೆ 4 ಮತಗಟ್ಟೆ ಅಧಿಕಾರಿಗಳು, 1 ಗ್ರೂಪ್ ಡಿ, 1 ಪೊಲೀಸ್ ಹಾಗೂ 1200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಿಗೆ 1 ಹೆಚ್ಚವರಿ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿತ್ತು. ಗ್ರೂಪ್ ಡಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನೂ ಒಳಗೊಂಡಂತೆ ಸುಮಾರು 1572 ಮಂದಿ ಚುನಾವಣಾ ಕರ್ತವ್ಯಕ್ಕಾಗಿ 25 ಬಸ್ ಗಳು, 26 ಮ್ಯಾಕ್ಸಿ ಕ್ಯಾಬ್, 22 ಮಿನಿ ಬಸ್, 20 ಜೀಪುಗಳಲ್ಲಿ ತೆರಳಿದ್ದು, ರಾತ್ರಿ ಮತಯಂತ್ರಗಳು ಸುರಕ್ಷಿತವಾಗಿ ವಾಪಸಾದವು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ 156 ಮತಗಟ್ಟೆಗಳನ್ನು ವೆಬ್ ಕಾಸ್ಟಿಂಗ್ ಗಾಗಿ ಆಯ್ಕೆ ಮಾಡಲಾಗಿತ್ತು. 62 ಮತಗಟ್ಟೆಗಳಿಗೆ ಅರೆ ಸೇನಾ ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. 5 ಮತಗಟ್ಟೆಗಳನ್ನು ‘ಸಖಿ’ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು,. 1 ಯಕ್ಷಗಾನ, 2 ಕಂಬಳ, 1 ನೀಲತರಂಗ, 1 ಪರಂಪರೆ, 1 ಗೋಗ್ರೀನ್, 1 ವಿಕಲಚೇತನ ಮತಗಟ್ಟೆಗಳಾಗಿ ಸ್ವೀಪ್ ಯೋಜನೆಯಡಿ ಗುರುತಿಸಲಾಗಿತ್ತು.
ಚುನಾವಣಾ ವೀಕ್ಷಕರಾದ ದೀಪಾಂಕರ್ ಸಿನ್ಹಾ, ಚುನಾವಣಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಚುನಾವಣಾಧಿಕಾರಿ ಎಸ್ ಬಿ ಕೂಡಲಗಿ, ಗ್ರೇಡ್ 2 ತಹಶೀಲ್ದಾರ್ ದಯಾನಂದ ಕೆ ಎಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಮಧು ಎಂ, ಚುನಾವಣಾ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಉಪತಹಶೀಲ್ದಾರರಾದ ನರೇಂದ್ರನಾಥ ಮಿತ್ತೂರು, ರಾಜೇಶ್ ನಾಯಕ್ ಎನ್ ಎಮ್, ವಿಜಯ್ ವಿಕ್ರಮ್, ದಿವಾಕರ ಮುಗುಲ್ಯ ಸೇರಿದಂತೆ ವಿವಿಧ ಇಲಾಖೆಗಳ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಮೇಲುಸ್ತುವಾರಿ ವಹಿಸಿದ್ದರು.
ವೀಲ್ ಚೇರ್ ನಲ್ಲಿ ಮತದಾನ:
ತಾಲೂಕಿನ ಹಲವೆಡೆ ವೃದ್ಧರು, ಅಶಕ್ತರು, ಅಂಗವಿಕಲರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಹಲವೆಡೆ ಮನೆ ಮನೆ ಮತದಾನ ಪ್ರಕ್ರಿಯೆ ನಡೆಸಲಾಯಿತಾದರೂ, ಕೆಲವರು ತಾವು ಮತಗಟ್ಟೆಗೇ ಬಂದು ಮತ ಚಲಾಯಿಸುವುದಾಗಿ ಹೇಳಿದ್ದು ಒಂದು ಕಾರಣವಾದರೆ, 12 ಡಿ ಪತ್ರಕ್ಕೆ ಬೇಡಿಕೆ ಇದ್ದರೂ ಮನೆಗೆ ದೂರವಾಣಿ ಕರೆ ಮಾಡಿ ಬರುತ್ತೇವೆ ಎಂದು ಹೇಳಿ ಬಾರದಿದ್ದ ಕುರಿತು ದೂರುಗಳು ಬಂದವು. ಮೂಡಾಯಿಕೋಡಿ ಧಾರೆಕಟ್ಟೆ ಭಾಗದಲ್ಲಿ 12 ಡಿ ಪತ್ರವನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿಬಂತು. ಹೀಗಾಗಿ ಈ ಭಾಗದ ಮತದಾರರಾದ ವಿಕ್ಟರ್ ಬರೆಟ್ಟೋ ಅವರನ್ನು ವೀಲ್ ಚೇರ್ ಹಾಗೂ ನಡೆಯಲು ಸಾಧ್ಯವಾಗದ ಐತಪ್ಪ ಬೆಳ್ಚಡ ಅವರನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಮತ ಚಲಾಯಿಸಲಾಯಿತು. ಇಂಥ ಸಮಸ್ಯೆ ಹಲವೆಡೆ ಆಗಿದೆ ಎಂಬ ದೂರುಗಳು ಬಂದವು.
ಗಣ್ಯರ ಮತದಾನ:
ಕೇಂದ್ರ ಮಾಜಿ ಸಚಿವ 86ರ ಹರೆಯದ ಬಿ.ಜನಾರ್ದನ ಪೂಜಾರಿ ತಮ್ಮ ಕುಟುಂಬದೊಂದಿಗೆ ಬಂಟ್ವಾಳ ಎಸ್.ವಿ.ಎಸ್. ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಕಲ್ಲಡ್ಕ ಶಾಲೆಯಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಬಂಟ್ವಾಳ ಕ್ಷೇತ್ರಕ್ಕೊಳಪಡುವ ಮಿತ್ತನಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ತೊಡಂಬಿಲ ಶಾಲೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಂಗಳೂರು ಉತ್ತರ ಕ್ಷೇತ್ರದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕೈಕೊಟ್ಟ ಮತಯಂತ್ರಗಳು:
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬೂತ್ ಸಂಖ್ಯೆ 90 ರ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡಿದ್ದು, ಕೆಲ ಹೊತ್ತು ಸ್ಥಗಿತಗೊಂಡ ಘಟನೆ ನಡೆಯಿತು. ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಬೂತ್ ಸಂಖ್ಯೆ 80ರ ಪುದು ಗ್ರಾಮಪಂಚಾಯತ್ ನಲ್ಲಿ ನಡೆಯುವ ಮತದಾನ ಪ್ರಕ್ರಿಯೆ ಸುಮಾರು 40 ನಿಮಿಷಗಳಕಾಲ ಸ್ಥಗಿತಗೊಂಡಿತು.
Be the first to comment on "DAKSHINA KANNADA: ದಕ್ಷಿಣ ಕನ್ನಡ – ಶೇ.75.87, ಬಂಟ್ವಾಳದಲ್ಲಿ 80.27 ಮತದಾನ.. ಜಿಲ್ಲೆಯ ಮತದಾನದ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ"