ಬಂಟ್ವಾಳ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (YOGI ADITYANATH) ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ರಾಜೇಶ್ ನಾಯ್ಕ್ (RAJESH NAIK) ಪರ ರೋಡ್ ಶೋ ನಡೆಸಲಿದ್ದು, ಶನಿವಾರ ಬೆಳಗ್ಗೆ 11ರ ಬಳಿಕ ಬಿ.ಸಿ.ರೋಡ್ ಮಂಗಳೂರು ಸಂಚಾರ ವ್ಯತ್ಯಯವಾಗಲಿದೆ. ಯೋಗಿ ಹೊರಡುವವರೆಗೂ ಮಂಗಳೂರು ಬಿ.ಸಿ.ರೋಡ್ ಮಧ್ಯೆ ವಿಶೇಷವಾಗಿ ಬಿ.ಸಿ.ರೋಡ್ ಪೇಟೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಲಿದ್ದು, ಬೆಳಗ್ಗಿನಿಂದಲೇ ವಾಹನಗಳನ್ನು ಬಿ.ಸಿ.ರೋಡಿನ ಫ್ಲೈಓವರ್ ಬದಿಯಲ್ಲಿ ನಿಲ್ಲಿಸಲೂ ನಿರ್ಭಂಧ ಹೇರಲಾಗಿದೆ. ಭದ್ರತಾ ದೃಷ್ಟಿಯಿಂದ ಈ ಕ್ರಮವನ್ನು ಆಡಳಿತ ಮಾಡುತ್ತಿದೆ.
ಯೋಗಿ ಬರುತ್ತಾರೆ ಎಂದು ಬಿ.ಸಿ.ರೋಡ್ ಇಡೀ ಪೊಲೀಸರಿಂದ ತುಂಬಿದ್ದು, ರಸ್ತೆಯಲ್ಲಿ ಅಂಗಡಿ, ಮುಂಗಟ್ಟುಗಳ ಮುಂಭಾಗ ನಿಲ್ಲಿಸಲಾಗಿದ್ದ ವಾಹನಗಳನ್ನು ಭದ್ರತಾ ಕಾರಣಕ್ಕೋಸ್ಕರ ತೆರವುಗೊಳಿಸಿದ್ದಾರೆ. ಡಿವೈಡರ್ ಗಳಿಗೆ ತಾತ್ಕಾಲಿಕ ಬೇಲಿಯನ್ನೂ ಹಾಕಲಾಗಿದೆ.
ಸಂಜೆ 4 ಗಂಟೆಗೆ ಯೋಗಿ ಬರಲಿದ್ದಾರೆ. ಆದರೆ ಮಧ್ಯಾಹ್ನ 12 ಗಂಟೆಯಿಂದಲೇ ರಸ್ತೆಯನ್ನು ಬಂದ್ ಮಾಡಲಾಗುತ್ತದೆ. ರಾತ್ರಿ 8 ಗಂಟೆವರೆಗೂ ರಸ್ತೆ ಓಪನ್ ಆಗುವುದು ಕಷ್ಟ. ಹೀಗಾಗಿ ಈ ಭಾಗದ ಸಾರ್ವಜನಿಕರು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾದದ್ದು ಅನಿವಾರ್ಯ.
ಬಸ್ತಿಪಡು ಮೈದಾನದಲ್ಲಿರುವ ಹೆಲಿಪ್ಯಾಡ್ ನಲ್ಲಿ ಯೋಗಿ ಇಳಿಯಲಿರುವುದರಿಂದ ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಬಿ.ಸಿ.ರೋಡ್ ನಿವಾಸಿಗಳಿಗೆ ಈ ಸೌಲಭ್ಯವಿಲ್ಲ. ಯೋಗಿ ಹೊರಡುವವರೆಗೆ ಎಲ್ಲಿಗೂ ಹೋಗದಂತೆ ನಿರ್ಬಂಧ ಹಾಕಲಾಗಿದೆ.ಇವು ಪರ್ಯಾಯ ಮಾರ್ಗಗಳು.
- ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳನ್ನು ಬಂಟ್ವಾಳ ಬೈಪಾಸ್ ಮೂಡುಬಿದಿರೆ ಕ್ರಾಸ್ ನಿಂದ ಸೊರ್ನಾಡು, ಮೂಲರಪಟ್ನ, ಸೂರಲ್ಪಾಡಿ, ಗುರುಪುರ ಕೈಕಂಬ ಮೂಲಕ ಮಂಗಳೂರು ಕಡೆಗೆ ತೆರಳುವುದು
- ಮಂಗಳೂರಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಪಂಪ್ ವೆಲ್ ನಿಂದ ನೇರವಾಗಿ ತೊಕ್ಕೊಟ್ಟು ಮಾರ್ಗವಾಗಿ ಮೆಲ್ಕಾರಿಗೆ ತೆರಳುವುದು.
- ಮಂಗಳೂರಿಂದ ಬೆಳ್ತಂಗಡಿಗೆ ತೆರಳುವ ವಾಹನ ಗುರುಪುರ ಕೈಕಂಬ ಸೂರಲ್ಪಾಡಿ, ಮೂಲರಪಟ್ನ, ಸೊರ್ನಾಡು ಮೂಲಕ ಬೆಳ್ತಂಗಡಿಗೆ ತೆರಳುವುದು.
- ಬೆಂಗಳೂರು ಕಡೆಯಿಂದ ಬರುವ ವಾಹನಗಳನ್ನು ಮೆಲ್ಕಾರ್, ಮುಡಿಪು, ತೊಕ್ಕೊಟ್ಟು ಮಾರ್ಗವಾಗಿ ಮಂಗಳೂರಿಗೆ ತೆರಳುವುದು
Be the first to comment on "ಗಮನಿಸಿ: ಸಂಜೆ ಬಿ.ಸಿ.ರೋಡಿಗೆ ಯೋಗಿ: ಮಧ್ಯಾಹ್ನದಿಂದ ರಾತ್ರಿವರೆಗೂ ವಾಹನ ಪ್ರವೇಶಕ್ಕೆ ತಡೆ – ಬದಲಾವಣೆ ಎಲ್ಲೆಲ್ಲಿ?"