ಸತ್ಯದರ್ಶನದ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕರಾವಳಿಸುದ್ದಿ ಓದುಗರು ಮೆಚ್ಚುವ ಪತ್ರಿಕೆಯಾಗಿ ಮೂಡಿಬರಲಿ ಎಂದು ಸೂರಿಕುಮೇರು ಚರ್ಚ್ ಧರ್ಮಗುರು ವಂ|ಗ್ರೆಗರಿ ಪಿರೇರಾ ಹೇಳಿದರು.
ಮಾಣಿಯಲ್ಲಿ ಭಾನುವಾರ ನಡೆದ “ಕರಾವಳಿ ಸುದ್ದಿ” ವಾರ ಪತ್ರಿಕೆಯ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಾಮಾಜಿಕ ಕಾಳಜಿ ಹೊಂದಿರುವ ರೋಷನ್ ಹಾಗೂ ಅನಿತಾ ದಂಪತಿ ಹೊಸಪತ್ರಿಕೆಯ ನೇತೃತ್ವವಹಿಸಿರುವುದು ನಮ್ಮ ಚರ್ಚ್ ಗೂ ಅಭಿಮಾನದ ಸಂಗತಿ ಎಂದರು.ಸೂರಿಕುಮೇರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಹಾಗೂ ರಶ್ಮಿ ಫೆರ್ನಾಂಡಿಸ್ ದಂಪತಿ ನೂತನ ಕಛೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಅವರು, ದೇವರ ದಯೆ ಹಾಗೂ ಎಲ್ಲರ ಸಹಕಾರದೊಂದಿಗೆ ವಾರಪತ್ರಿಕೆ ಜನಪ್ರಿಯತೆ ಗಳಿಸಲಿ ಎಂದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ನಿಕಟಪೂರ್ವ ಕೇಂದ್ರೀಯ ಅಧ್ಯಕ್ಷರಾದ ಪಾವ್ಲ್ ರೊಲ್ಫಿ ಡಿ’ಕೋಸ್ಟರವರು ಮಾತನಾಡಿ, ಪತ್ರಿಕಾ ಧರ್ಮದ ಎಲ್ಲಾ ನೀತಿ ನಿಯಮಗಳನ್ನು ಪಾಲಿಸಿಕೊಂಡು ಮುಂದೊಂದು ದಿನ ‘ಕರಾವಳಿ ಸುದ್ದಿ’ ದಿನಪತ್ರಿಕೆಯಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.ಕರಾವಳಿ ಸುದ್ದಿಯ ಸಂಪಾದಕ ಹಾಗೂ ಪ್ರಕಾಶಕ ರೋಷನ್ ಬೊನಿಫಾಸ್ ಮಾರ್ಟಿಸ್ ಪ್ರಸ್ತಾವನೆಯ ಜೊತೆಗೆ ಸ್ವಾಗತಿಸಿದರು. ಎಲ್ಲರ ಸಹಕಾರದ ನಿರೀಕ್ಷೆಯೊಂದಿಗೆ ಮಾಧ್ಯಮ ರಂಗಕ್ಕೆ ಕಾಲಿರಿಸಿದ್ದೇನೆ. ಪರಿಣಾಮಕಾರಿ ಪತ್ರಿಕೆಯನ್ನು ಸಮಾಜಕ್ಕೆ ನೀಡುವ ಹಂಬಲ ತನ್ನದಾಗಿದೆ ಎಂದರು. ಇದೇ ಸಂದರ್ಭ ಹೆನ್ರಿ ಮೆಂಡೋನ್ಸಾ ಪೆರ್ನಾಲ್ ಅವರು ಕರಾವಳಿ ಸುದ್ದಿಯ ವೆಬ್ಸೈಟ್ ಅನ್ನು ಅನಾವರಣ ಗೊಳಿಸಿದರು.ಕರಾವಳಿ ಸುದ್ದಿಯ ಪಿಆರ್.ಒ ಚೇತನ್ ರೈ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಉಪಸಂಪಾದಕಿ ಅನಿತಾ ರೋಷನ್ ಮಾರ್ಟಿಸ್ ವಂದಿಸಿದರು
Be the first to comment on "ಸತ್ಯದರ್ಶನ ಜೊತೆಗೆ ಸಾಮಾಜಿಕ ಸಮಸ್ಯೆಗೆ ಪತ್ರಿಕೆ ಸ್ಪಂದಿಸಲಿ: ವಂ.ಗ್ರೆಗರಿ ಪಿರೇರ"