ಬಂಟ್ವಾಳ: ಸೋಮವಾರ ಬಂಟ್ವಾಳ ಪುರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 2023-24ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಂಡಿಸಿದರು. ವಿರೋಧ ಪಕ್ಷ ಬಿಜೆಪಿ ಬಲವಾದ ವಿರೋಧವನ್ನು ಇದಕ್ಕೆ ವ್ಯಕ್ತಪಡಿಸಿದ್ದು, ಹಲವು ಲೋಪದೋಷಗಳನ್ನು ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ಗಮನ ಸೆಳೆದರು. ಬಜೆಟ್ ಮಂಡನೆಯನ್ನು ಆಡಳಿತ ಮಾಡಿದರೆ, ಬಿಜೆಪಿ ವಿರೋಧವನ್ನು ದಾಖಲಿಸಿತು.
ಒಟ್ಟು ರೂ 29,48,964 ರ ಮಿಗತೆ ಬಜೆಟ್ ಅನ್ನು ಮಂಡಿಸಿದ ಅವರು, ಆರಂಭಿಕ ಶಿಲ್ಕು 4.22 ಕೋಟಿ ರೂ ಸೇರಿ, 31,87,17,268 ರೂ ಜಮೆಯೊಂದಿಗೆ 36.09 ಕೋಟಿ ರೂ ಆದಾಯ ನಿರೀಕ್ಷೆ ಹೊಂದಿದ್ದು,, 35.79 ಕೋಟಿ ರೂ ಖರ್ಚು ಅಂದಾಜಿಸಲಾಗಿದೆ, ಅಂತಿಮವಾಗಿ 29.48 ಕೋಟಿ ರೂ ಮಿಗತೆಯಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.
ಪುರಸಭೆ ಸ್ವಂತ ಆದಾಯದಿಂದ 2.95 ಕೋಟಿ ರೂ ಕಚೇರಿ ಆಡಳಿತ ವೆಚ್ಚ, ದುರಸ್ತಿ, ನಿರ್ವಹಣೆ ಇತರ ಸ್ಥಿರಾಸ್ತಿಗಳಿಗೆ 70 ಲಕ್ಷ ರೂ, ಹೊರಗುತ್ತಿಗೆ ವೆಚ್ಚ 26 ಲಕ್ಷ ರೂ, ಸ್ಥಿರಾಸ್ಥಿಗಳ ನಿರ್ವಹಣೆಗೆ 5 ಲಕ್ಷ ರೂ, ಕಾಮಗಾರಿಗಳಿಗೆ 2.5 ಕೋಟಿ ರೂ, ರಸ್ತೆ ಬದಿ ಚರಂಡಿ ನಿರ್ವಹಣೆಗೆ 1.3 ಕೋಟಿ ರೂ, ಬೀದಿ ದೀಪ ನಿರ್ವಹಣೆಗೆ 26 ಲಕ್ಷ ರೂ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 50 ಲಕ್ಷ ರೂ, ಯಂತ್ರೋಪಕರಣಕ್ಕೆ 25 ಲಕ್ಷ ರೂ, ನೀರು ಸರಬರಾಜು ಸಂಬಂಧಿತ ಖರ್ಚು 35 ಲಕ್ಷ ರೂ, ಉದ್ಯಾನವನ ನಿರ್ವಹಣೆಗೆ 5 ಲಕ್ಷ ರೂ ಖರ್ಚಿದೆ ಎಂದರು.
ರಾಜ್ಯ ಸರಕಾರದಿಂದ 2.10 ಕೋಟಿ ರೂ, ಕೇಂದ್ರದಿಂದ 3.25 ಕೋಟಿ, ವಿದ್ಯುತ್ 3 ಕೋಟಿ, ಕಲ್ಯಾಣ ನಿಧಿಗಳಿಂದ 2.2 ಕೋಟಿ ರೂ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಸ್ತಿ ತೆರಿಗೆಯಿಂದ 2.26 ಕೋಟಿ ರೂ, ನೀರಿನ ಶುಲ್ಕದಿಂದ 85 ಲಕ್ಷ ರೂ, ನೀರಿನ ಜೋಡಣೆಯಿಂದ 6 ಲಕ್ಷ ರೂ ನಿರೀಕ್ಷೆ, ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 65 ಲಕ್ಷ ರೂ, ಘನತ್ಯಾಜ್ಯ ನಿರ್ವಹಣೆ ಶುಲ್ಕದಿಂದ 9 ಲಕ್ಷ ರೂ, ಕಟ್ಟಡ ಪರವಾನಗಿಯಿಂದ 10 ಲಕ್ಷ, ದಂಡನಾ ಶುಲ್ಕ 18.8 ಲಕ್ಷ ರೂ, ಖಾತಾ ಪ್ರತಿ, ಬದಲಾವಣೆಯಿಂದ 7.6 ಲಕ್ಷ ರೂ, ಅಭಿವೃದ್ಧಿ ಶುಲ್ಕ 30 ಲಕ್ಷ, ಸೇವಾ ಶುಲ್ಕ 16 ಲಕ್ಷ, ಉದ್ಯಮ ಪರವಾನಗಿಯಿಂದ 13.75 ಲಕ್ಷ ನಿರೀಕ್ಷಿಸಲಾಗಿದೆ ಎಂದರು.
ಬಿಜೆಪಿ ಸದಸ್ಯ ಎ. ಗೋವಿಂದ ಪ್ರಭು ಈ ಕುರಿತು ಮಾತನಾಡಿ, ನಾವು ತೆರಿಗೆ ಸಂಗ್ರಹದ ಕುರಿತು ಗಮನ ಹರಿಸುತ್ತಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ, ಕೇವಲ ಅನುದಾನ ನಿರೀಕ್ಷೆ ಮೂಲಕ ಆದಾಯ ಬಯಸುತ್ತಿದ್ದೇವಾ, ಇಲ್ಲಿ ಹಲವಾರು ಕಟ್ಟಡಗಳಿವೆ, ಕಟ್ಟಡ ಪರವಾನಗಿ, ಅಭಿವೃದ್ಧಿ ಮೂಲಕ ಸಂಗ್ರಹದ ನಿರೀಕ್ಷೆಯ ಗುರಿಯನ್ನೇ ಕಡಿಮೆ ಇಡಲಾಗಿದೆ, ತೆರಿಗೆ ಸಂಗ್ರಹದ ಕುರಿತು ಹೆಚ್ಚಿನ ಗಮನ ಹರಿಸದಿದ್ದರೆ, ಪುರಸಭೆ ಆದಾಯ ಗಳಿಸುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ನಿರೀಕ್ಷಕ ಗೋಪಾಲಕೃಷ್ಣ ಶೆಟ್ಟಿ, ಪ್ರಸ್ತಾವಿತ ಅಂಶಗಳಲ್ಲಿ ಲೋಪವಿರುವುದನ್ನು ಒಪ್ಪಿಕೊಂಡು, ಇದನ್ನು ಬದಲಾಯಿಸಲು ತಯಾರಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ನ ಹಿರಿಯ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ವಾಸು ಪೂಜಾರಿ ಅವರು ನೀರಿನ ಮೀಟರ್ ಸಹಿತ ವಿವಿಧ ವಿಚಾರಗಳ ಕುರಿತು ಗಮನ ಸೆಳೆದರು. ಸದಸ್ಯರಾದ ಸಿದ್ದೀಕ್ ಗುಡ್ಡೆಯಂಗಡಿ, ವಿದ್ಯಾವತಿ ಪ್ರಮೋದ್, ಇದ್ರೀಸ್, ಹರಿಪ್ರಸಾದ್, ಗಂಗಾಧರ ಪೂಜಾರಿ, ವಾಸು ಪೂಜಾರಿ, ಜನಾರ್ದನ ಚಂಡ್ತಿಮಾರ್, ಲೋಲಾಕ್ಷ ಶೆಟ್ಟಿ, ಲುಕ್ಮಾನ್, ಝೀನತ್ ಮಾತನಾಡಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸ್ವಾಗತಿಸಿದರು.
Be the first to comment on "29.48 ಲಕ್ಷ ರೂ ಮಿಗತೆ ಬಜೆಟ್ ಮಂಡಿಸಿದ ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್"