ರಾಜ್ಯ ಸರಕಾರಿ ನೌಕರರ ಸಂಘದ ಸೂಚನೆಯಂತೆ ಬಂಟ್ವಾಳ ತಾಲೂಕಿನಲ್ಲಿರುವ ಸುಮಾರು ಎರಡು ಸಾವಿರದಷ್ಟು ಸರಕಾರಿ ನೌಕರರು ಮಾರ್ಚ್ 1ರಂದು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸುವ ಮೂಲಕ ವಿವಿಧ ಬೇಡಿಕೆ ಈಡೇರಿಕೆಗೆ ಮುಷ್ಕರ ಹೂಡಿದರು. ಬಂಟ್ವಾಳ ತಾಲೂಕು ಆಡಳಿತ ಸೌಧ, ತಾಲೂಕು ಪಂಚಾಯಿತಿ ಕಚೇರಿ, ಸಿಡಿಪಿಒ ಕಚೇರಿ, ಬಿಇಒ ಕಚೇರಿ, ಮುನ್ಸಿಪಾಲಿಟಿ, ಸರಕಾರಿ ಆಸ್ಪತ್ರೆ, ಸರ್ವೆ, ಸಬ್ ರಿಜಿಸ್ಟ್ರಾರ್ ಕಚೇರಿ ಸಹಿತ ವಿವಿಧ ಕಚೇರಿಗಳು ಬಾಗಿಲು ಹಾಕಿದವು. ಇವಲ್ಲದೆ ತಾಲೂಕಿನಲ್ಲಿರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಘದ ಸೂಚನೆಯನ್ನು ಮೊದಲೇ ಮುಖ್ಯಶಿಕ್ಷಕರು ವಿದ್ಯಾರ್ಥಿಗಳ ಪಾಲಕರಿಗೆ ರವಾನಿಸಿದ ಕಾರಣ ಶಾಲೆಗಳು ಇಂದು ತೆರೆಯಲೇ ಇಲ್ಲ.
ಸರಕಾರಿ ನೌಕರರ ವೇತನ ಏರಿಕೆಯಾದ ಕುರಿತು ಅದರ ಸಂಘದ ಮುಖ್ಯಸ್ಥರು ಘೋಷಿಸಿ, ಮುಷ್ಕರ ಹಿಂಪಡೆವ ವಿಚಾರದ ಕುರಿತು ತಿಳಿಸಿ, ಶೇ.17ರಷ್ಟು ವೇತನ ಏರಿಕೆಯ ಘೋಷಣೆಯನ್ನು ತಿಳಿಸಿದರು. ಹೀಗಾಗಿ ಮುಷ್ಕರವನ್ನು ಹಿಂಪಡೆಯಲಾಯಿತು. ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು ಅವರು ಮುಷ್ಕರ ಯಶಸ್ವಿಯಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭ ಮಧ್ಯಾಹ್ನದ ಬಳಿಕ ಮುಷ್ಕರವನ್ನು ವಾಪಸ್ ಪಡೆಯಲಾದರೂ ಬಂದ್ ಆದ ಕಚೇರಿಗಳು ಮತ್ತೆ ಎಂದಿನ ಕಾರ್ಯಾಚರಣೆಗಿಳಿಯಲಿಲ್ಲ. ಒಂದು ದಿನದ ಮಟ್ಟಿಗೆ ಸರಕಾರಿ ಶಾಲೆ ಮಕ್ಕಳು ಫ್ರೀ ರಜಾ ಅನುಭವಿಸಿದರು. ತಮಗೆ ಸಂಬಂಧವೇ ಇಲ್ಲದ ವಿಚಾರವಾಗಿದ್ದರೂ ಸರಕಾರಿ ಕಚೇರಿಗಳಲ್ಲಿ ದುಡಿಯುವ ಗುತ್ತಿಗೆ ನೌಕರರೂ ಅನಿವಾರ್ಯವಾಗಿ ಕಚೇರಿಯಿಂದ ಹೊರಗುಳಿಯಬೇಕಾಯಿತು.
Be the first to comment on "ಸರಕಾರಿ ನೌಕರರ ಮುಷ್ಕರ: ಬಾಗಿಲು ಹಾಕಿದ ಕಚೇರಿಗಳು, ಆಸ್ಪತ್ರೆ, ಶಾಲೆಗಳು"