ಸಜಿಪಮುನ್ನೂರು ಗ್ರಾಮ ಸಹಿತ ಸುತ್ತಮುತ್ತಲಿನ ಐದು ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು 279 ಕೋಟಿ ರೂಗಳ ಯೋಜನೆಯೊಂದು ಶಾಸಕ ರಾಜೇಶ್ ನಾಯ್ಕ್ ಪ್ರಯತ್ನದಿಂದ ಆಗುತ್ತಿದ್ದು, ಭವಿಷ್ಯದಲ್ಲಿ ಇಲ್ಲಿನ ನೀರಿನ ಸಮಸ್ಯೆ ನೀಗಲಿದೆ. ಅದಕ್ಕೂ ಮುಂಚಿತವಾಗಿ ತತ್ ಕ್ಷಣದ ಕ್ರಮವಾಗಿ ಕರೋಪಾಡಿ ಯೋಜನೆಗೆ ತಾತ್ಕಾಲಿಕವಾಗಿ ಪ್ರೆಶರ್ ಫಿಲ್ಟರ್ ಅಳವಡಿಕೆ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಸಜಿಪಮುನ್ನೂರು ಗ್ರಾಮದ ಆಲಾಡಿ ಪರಿಸರದ ನಾಗರಿಕರ ಅಹವಾಲು ಸ್ವೀಕರಿಸಲು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರೊಂದಿಗೆ ಮಂಗಳವಾರ ಆಗಮಿಸಿ, ಗ್ರಾಪಂ ಅಧ್ಯಕ್ಷ, ಸದಸ್ಯರ ಸಹಿತ ಸ್ಥಳೀಯ ಗಣ್ಯರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಗ್ರಾಮದ ಜನತೆಗೆ ಕುಡಿಯುವ ನೀರು ತತಕ್ಷಣ ನೀಡಲು ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಿಂದ ನೀರು ಶುದ್ದೀಕರಣ ವ್ಯವಸ್ಥೆಯನ್ನು ಮಾಡಿ,0.2 ಎಂ.ಎಲ್.ಡಿ. ನೀರನ್ನು ಸಜೀಪ ಮುನ್ನೂರು ಗ್ರಾಮಕ್ಕೆ ನೀಡುವಂತೆ ಸೂಚಿಸಿದ್ದಾಗಿ ಅವರು ಹೇಳಿದರು. ಉಳ್ಳಾಲ ಹಾಗೂ ಬಂಟ್ವಾಳದ ಹಲವು ಗ್ರಾಮಗಳಿಗೆ ನೀರನ್ನು ಒದಗಿಸುವ ಕಚ್ಚಾನೀರು ಹಾಗೂ ಶುದ್ದೀಕರಣದ ನೀರಿನ ಪೈಪ್ ಲೈನ್ ಅಳವಡಿಕೆ ಗೆ ಅವಕಾಶ ನೀಡುವಂತೆ ಕೋರಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸಜೀಪ ಮುನ್ನೂರು ಗ್ರಾಮಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ಈ ಹಿಂದೆಯೂ ಅನ್ಯಾಯವಾಗಿರುವುದು ನಮಗೆ ತಿಳಿದಿದ್ದು, ಸತತ ಎರಡು ವರ್ಷಗಳ ಹೋರಾಟದ ಫಲವಾಗಿ 279 ಕೋಟಿ ರೂ ಗಳ ಯೋಜನೆ ಜಾರಿಗೆ ತರಲಾಗುವುದು. ತತಕ್ಷಣದ ಪರಿಹಾರಕ್ಕಾಗಿ ಕೊಳವೆ ಬಾವಿ ಕೊರೆದರು ನೀರು ಸಿಗದೆ ಇರುವದುದರಿಂದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವರನ್ನು ಸ್ಥಳಕ್ಕೆ ಕರೆಯಿಸಿ, ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರ ಎದುರಿನಲ್ಲಿ, ಮಾತುಕತೆ ನಡೆಸಲಾಗಿದೆ ಎಂದರು.
ಬಳಿಕ ಸಚಿವರು ಮುಡಿಪುವಿನಲ್ಲಿ ನಿರ್ಮಾಣಗೊಂಡಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಜಿಪಮುನ್ನೂರು ಗ್ರಾಪಂ ಅಧ್ಯಕ್ಷೆ ಸಬೀನಾ, ಸ್ಥಳೀಯ ಗಣ್ಯರಾದ ಸಂತೋಷ್ ಜಿ.ಶೆಟ್ಟಿ ದಳಂದಿಲ, ಶ್ರೀಕಾಂತ್ ಶೆಟ್ಟಿ ಸಂಕೇಶ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ಸಹಾಯಕ ಇಂಜಿನಿಯರ್ ಶೋಭಾಲಕ್ಮೀ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಕೆ.ನಾಯ್ಕ್, ಸಹಾಯಕ ಇಂಜಿನಿಯರ್ ಜಗದೀಶ್ ನಿಂಬಾಳ್ಕರ್, ಸಜೀಪ ಮುನ್ನೂರು ಪಿಡಿಒ ಲಕ್ಷಣ್, ಸಜೀಪ ಮೂಡ ಪಿ.ಡಿಒ ಮಾಯಕುಮಾರಿ, ಕಂದಾಯ ನಿರೀಕ್ಷಕಿ ಸ್ವಾತಿ, ಗುತ್ತಿಗೆದಾರರಾದ ನಂದಾ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಸಜಿಪಮುನ್ನೂರು ಸಹಿತ 5 ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು 279 ಕೋಟಿ ರೂ ಯೋಜನೆ: ಸಚಿವ ಭೈರತಿ ಬಸವರಾಜು"