ಬಂಟ್ವಾಳ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾರಾಯಣಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದ್ದಕ್ಕೆ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ವತಿಯಿಂದ ಏರ್ಪಡಿಸಲಾದ ಪಾದಯಾತ್ರೆ ಸಮಿತಿ ಅಭಿನಂದನೆ ಸಲ್ಲಿಸಿದೆ. ಸಮಿತಿ ಜಿಲ್ಲಾಧ್ಯಕ್ಷ ಮತ್ತು ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಬಿ.ಸಿ.ರೋಡ್ ನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತ್ತಷ್ಟು ಬೇಡಿಕೆಗಳ ಈಡೇರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ನಿಗಮ ಘೋಷಣೆ ಆಗಿದ್ದು, ಅನುದಾನ ನಿಗದಿ ಅಧಿವೇಶನ ಸಂದರ್ಭ ಆಗಬಹುದು ಎಂಬ ಭರವಸೆ ನಮಗಿದೆ, ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂದರು. ಮಾರ್ಚ್ 12ರಂದು ಭಾನುವಾರ ಅಪರಾಹ್ನ 4ರಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಜಿಲ್ಲೆಯ ಬಿಲ್ಲವ ಮುಖಂಡರ, ಸಂಘಟನೆಗಳ, ಗರೋಡಿ ದೈವಸ್ಥಾನಗಳ ಮುಖಂಡರು, ಸಮಾಜಸೇವಕರ ಸಭೆ ಕರೆಯಲಾಗುವುದು ಎಂದು ಜಿತೇಂದ್ರ ಸುವರ್ಣ ಹೇಳಿದರು.
ಬಿಲ್ಲವರಿಗೆ ಟಿಕೆಟ್: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಕನಿಷ್ಠ ಮೂರು ಶಾಸಕ ಅಭ್ಯರ್ಥಿಗಳ ಸ್ಪರ್ಧೆ ಗೆ ಅವಕಾಶ ನೀಡಬೇಕು ಎಂದು ಅವರು ಇದೇ ಸಂದರ್ಭ ರಾಜಕೀಯ ಪಕ್ಷಗಳಿಗೆ ಒತ್ತಾಯ ಮಾಡಿದರು.
ಜಿಲ್ಲಾ ಮೂರ್ತೆದಾರರ ಸೇವಾ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವಕ್ತಾರ ಬೇಬಿ ಕುಂದರ್, ಪಾದಯಾತ್ರೆ ಸಮಿತಿ ಸಂಚಾಲಕ ಪ್ರೇಮನಾಥ ಕೆ, ಎಸ್.ಎನ್.ಜಿ.ವಿ. ಬಂಟ್ವಾಳ ಘಟಕಾಧ್ಯಕ್ಷ ನವೀನ್ ಕೋಟ್ಯಾನ್, ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಪ್ರಭಾಕರ, ಪಾದಯಾತ್ರೆ ಸಮಿತಿ ಸಹಕಾರ್ಯದರ್ಶಿ ಸತೀಶ್ ಪೂಜಾರಿ ಬಾಯಿಲ, ಉಪಸ್ಥಿತರಿದ್ದರು.
Be the first to comment on "ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಘೋಷಣೆಗೆ ಸಿಎಂ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಧನ್ಯವಾದ ಸಲ್ಲಿಸಿದ ಪಾದಯಾತ್ರೆ ಸಮಿತಿ"