ಬಂಟ್ವಾಳ: ಬಂಟ್ವಾಳ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ವಜ್ಞ ಮಹರ್ಷಿ ಕುರಿತು ಮಾತನಾಡಿದ ನ್ಯಾಯವಾದಿ ಸುರೇಶ್ ಕುಲಾಲ್ ನಾವೂರು, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ, ಸಮಾಜ ಸುಧಾರಣೆಯನ್ನು ತ್ರಿಪದಿಗಳ ಮೂಲಕ ಮಾಡಿದ ಸರ್ವಜ್ಞನ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದ ಅಗತ್ಯವಿದ್ದು, ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸುವ ಸಂದೇಶಗಳು ವಚನಗಳಲ್ಲಿವೆ ಎಂದರು.
ಅಧ್ಯಕ್ಷತೆಯನ್ನು ಬಂಟ್ವಾಳ ತಹಸೀಲ್ದಾರ್ ಕೆ.ಎಸ್.ದಯಾನಂದ ವಹಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಈ ಸಂದರ್ಭ ಮಾತನಾಡಿ, ಸರ್ವಜ್ಞರಂಥ ದಾರ್ಶನಿಕರ ಜಯಂತಿ ಆಚರಣೆಗಳನ್ನು ಮಾಡುವ ಸಂದರ್ಭ ಸಮಾಜದ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂದರು.
ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶೇಷಪ್ಪ ಮೂಲ್ಯ ಮಾತನಾಡಿ, ಮಹಾತ್ಮರ ಜಯಂತಿ ಆಚರಣೆಗಳು ಸಮುದಾಯಕ್ಕಷ್ಟೇ ಅಲ್ಲ, ಎಲ್ಲ ವರ್ಗದ ಜನರೂ ಪಾಲ್ಗೊಳ್ಳುವಂತಾಗಬೇಕು ಎಂದರು. ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ನಾರಾಯಣ ಸಿ.ಪೆರ್ನೆ, ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಸಂತೋಷ್ ಮರ್ತಾಜೆ, ರಾಜ್ಯ ಕುಲಾಲ ಕುಂಬಾರ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾರತಿ ಎಸ್. ವಿವಿಧ ಪ್ರಮುಖರಾದ ಗಣೇಶ್ ಕುಲಾಲ್ ಮೈರಾನ್ ಪಾದೆ, ಲಕ್ಷಣ್ ಕುಲಾಲ್ ಅಗ್ರಬೈಲ್, ಮಾಧವ ಕುಲಾಲ್, ಮಚ್ಚೆಂದ್ರ ಸಾಲಿಯಾನ್, ಯಾದವ ಅಗ್ರಬೈಲು, ನಿತೀಶ್ ಪಲ್ಲಿಕಂಡ, ವಿತೇಶ್ ಕಾಮಾಜೆ, ಸುಂದರ ಬಿಸಿರೋಡು, ಡೊಂಬಯ್ಯ,ರಾಮ ಬಿಸಿರೋಡು,ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವಿಷಯ ನಿರ್ವಾಹಕ ವಿಶುಕುಮಾರ್ ಉಪಸ್ಥಿತರಿದ್ದರು. ಶ್ರೀಕಲಾ ಕಾರಂತ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ"