ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಹಾಗೂ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಿಗೆ ಕೌಶಲ್ಯಭರಿತ ಶಿಕ್ಷಣ ದೊರಕಬೇಕು ಎಂಬ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಮುಂದೊಂದು ದಿನ ಇದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಎಂದರು.
ಮೇಳದಲ್ಲಿ 1180 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, 53 ಕಂಪನಿಗಳು ಇವರ ಸಂದರ್ಶನ ಪಡೆದರು. ಸುಮಾರು 60ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಆದೇಶ ಪತ್ರ ದೊರೆಯಿತು. 410ಕ್ಕೂ ಅಧಿಕ ಮಂದಿಗೆ ಎರಡನೇ ಸುತ್ತಿನ ಸಂದರ್ಶನಕ್ಕೆ ಆಹ್ವಾನ ನೀಡಲಾಯಿತು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಪೂರ್ವ ರಾಜ್ಯಪಾಲ, ಡಾ. ಗೀತ್‌ಪ್ರಕಾಶ್, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಂಚಾಲಕ ವಸಂತ ಮಾಧವ,ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಯಚ್ಚರಪ್ಪ ಬಡಿಗೇರ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಲಕ್ಷಣ ಕುಲಾಲ್ ಅಗ್ರಬೈಲು ಉಪಸ್ಥಿತರಿದ್ದರು.
ಕಾಲೇಜಿನ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ಉಪನ್ಯಾಸಕ ಹರ್ಷಿತ್ ವಂದಿಸಿದರು. ವಿದ್ಯಾರ್ಥಿ ಜೈದೀಪ್ ಅಮೈ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಕಲ್ಲಡ್ಕದಲ್ಲಿ ಉದ್ಯೋಗ ಮೇಳ: 60 ಮಂದಿಗೆ ಸ್ಥಳದಲ್ಲೇ ನೇಮಕಾತಿ, 410ಕ್ಕೂ ಅಧಿಕ ಮಂದಿ ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆ"