ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯ ವೇಳೆ ಐದು ಗ್ರಾಮಗಳಲ್ಲಿ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಅದನ್ನು ಕೂಡಲೇ ಪರಿಹರಿಸಬೇಕು ಹಾಗೂ ಹದಿನೈದು ದಿನಗಳಿಗೊಮ್ಮೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಕಚೇರಿಯಲ್ಲಿ ಪರಾಮರ್ಶೆ ಸಭೆ ನಡೆಸಬೇಕು, ಶಾಸಕರ ಕಚೇರಿಯಿಂದ ಸೂಚನೆಗಳನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತಿಯಲ್ಲಿ ಅವರ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರ ಸಮಸ್ಯೆಗಳನ್ನು ಆಲಿಸಿದ ಸಂಸದರು ಈ ಸೂಚನೆಗಳನ್ನು ನೀಡಿದ್ದಾರೆ.
ನರಿಕೊಂಬು ಗ್ರಾಪಂ ಅಧ್ಯಕ್ಷೆ ವಿನೀತಾ ಪುರುಷೋತ್ತಮ್ , ಗೋಳ್ತಮಜಲು ಗ್ರಾಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ ಮತ್ತು ಬಾಳ್ತಿಲ ಗ್ರಾಪಂ ಅಧ್ಯಕ್ಷೆ ಹಿರಣ್ಮಯಿ ಸಮಸ್ಯೆಗಳ ಕುರಿತು ತಿಳಿಸಿದರು.
ತಕ್ಷಣ ಸಮಸ್ಯೆ ಗೆ ಪರಿಹಾರ ಮಾಡದಿದ್ದರೆ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕಾದೀತು ಎಂದು ಎಚ್ಚರಿಸಿದ ನಳಿನ್, ಕುಡಿಯುವ ನೀರಿನ ಸಮಸ್ಯೆ ಜೊತೆ ಭೂ ಒತ್ತುವರಿ, ಗುಡ್ಡ ಅಗೆತ, ಮೆಸ್ಕಾಂ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಬೇಕು, ಜೊತೆಗೆ ಪ್ರತಿ 15 ದಿನಗಳಿಗೊಮ್ಮೆ ಶಾಸಕರ ಜೊತೆ ಅಧಿಕಾರಿಗಳು ಹಾಗೂ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಸಿಬ್ಬಂದಿಗಳು ಸಭೆ ನಡೆಸಬೇಕು. ಗ್ರಾ.ಪಂ.ವ್ಯಾಪ್ತಿಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಮ ಮಟ್ಟದ ಅಧಿಕಾರಿಗಳ ಜೊತೆಯೂ ಸಭೆ ನಡೆಸಬೇಕು ಎಂದರು.
ಹದಿನಾರು ದಿನಗಳಾದರೂ ಸಮಸ್ಯೆ ಗೊತ್ತಾಗಲಿಲ್ಲ ಎಂದರೆ ಏನರ್ಥ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಳಿನ್, ಎಂಎಲ್ಎ ಕಚೇರಿಯಿಂದ ಕರೆ ಬಂದಾಗ ಸ್ಪಂದಿಸಿ ಎಂದು ತಾಕೀತು ಮಾಡಿದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ನಿಂಗೇಗೌಡ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಸಹಿತ ಸಂಬಂಧಪಟ್ಟ ಗ್ರಾಪಂಗಳ ಪಿಡಿಒಗಳು, ಸದಸ್ಯರು ಉಪಸ್ಥಿತರಿದ್ದು, ಸಮಸ್ಯೆಗಳನ್ನು ವಿವರಿಸಿದರು
Be the first to comment on "ಹೆದ್ದಾರಿ ಕಾಮಗಾರಿ ಪ್ರಾಬ್ಲಂಗೆ ತುರ್ತು ಸ್ಪಂದನೆ – ಹೈವೇ ಅಧಿಕಾರಿಗಳಿಗೆ ಸಂಸದ ನಳಿನ್ ಸೂಚನೆ"