ಬಂಟ್ವಾಳ: ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಇಸ್ಮಾಯಿಲ್ ಕಾನತ್ತೂರು ಕಾಲೇಜು ಮೆಟ್ಟಿಲು ಹತ್ತಿದವರಲ್ಲ. ಆದರೆ ಅವರ ಜ್ಞಾನದಾಹ, ಆಸಕ್ತಿ ಮೆಚ್ಚುವಂತಹುದೇ. ಗುಜರಿ ವ್ಯಾಪಾರಿಯಾಗಿರುವ ಅವರ ಮನೆಯಲ್ಲಿ 2 ಸಾವಿರಕ್ಕೂ ಅಧಿಕ ಪುಸ್ತಕ ಸಂಗ್ರಹದ ಲೈಬ್ರೆರಿ ಇದೆ. ಇದರಿಂದ ಗುಜರಿ ಸೇರುವ ಪುಸ್ತಕಗಳು ತಿಜೋರಿಯಲ್ಲಿ ಬೆಚ್ಚಗೆ ಕುಳಿತಿವೆ.
ಬಂಟ್ವಾಳದ ಬಾಳೆಪುಣಿ ಗ್ರಾಮದ ಹೂಹಾಕುವಕಲ್ಲು ಎಂಬಲ್ಲಿ ಗುಜರಿ ಅಂಗಡಿ ನಡೆಸುತ್ತಿರುವ ಇವರು 25 ವರ್ಷಗಳಿಂದ ಗುಜರಿ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ಗುಜರಿಗೆ ಮಾರಿದ ಪುಸ್ತಕದಲ್ಲಿ ಉತ್ತಮ ಪುಸ್ತಕಗಳನ್ನು ಆಯ್ದು ತಮ್ಮ ಪುಟ್ಟ ನಿವಾಸದಲ್ಲಿ ಗ್ರಂಥಾಲಯ ಮಾಡಿದ್ದಾರೆ.
ಧರ್ಮ ಗ್ರಂಥಗಳು, ಪಠ್ಯ ಪುಸ್ತಕಗಳು: ಇಸ್ಮಾಯಿಲ್ ಅವರ ಲೈಬ್ರೆರಿಯಲ್ಲಿ 10 ರೂ. ಪುಸ್ತಕದಿಂದ ಹಿಡಿದು 2 ಸಾವಿರಕ್ಕೂ ಅಕ ವೌಲ್ಯದ ಪುಸ್ತಕಗಳಿವೆ. ನಾನಾ ಧರ್ಮಗ್ರಂಥಗಳು, ಕಥೆ ಪುಸ್ತಕಗಳು, ಮಹಾನ್ ಪುರುಷರ ಪುಸ್ತಕಗಳು, ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ, ಎಂಜಿನಿಯರಿಂಗ್‌ವರೆಗಿನ ಪುಸ್ತಕಗಳು ಇವರ ಸಂಗ್ರಹದಲ್ಲಿದೆ. ಪುಸ್ತಕ ಕೊಂಡುಕೊಳ್ಳಲು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಇವರ ಮನೆಗೆ ಬಂದು ಪುಸ್ತಕಗಳನ್ನು ಹುಡುಕಾಡಿ ಪಡೆದುಕೊಂಡು ಹೋಗುತ್ತಾರೆ.
ಯಾವುದೇ ಪುಸ್ತಕಗಳನ್ನು ಕೊಂಡೊಯ್ಯುವವರು ದಾಖಲೆ ಪುಸ್ತಕಕ್ಕೆ ಸಹಿ ಮಾಡಿ ಅವರು ಓದಿ ಮುಗಿಸಿದ ಬಳಿಕ ಮರಳಿ ತಂದುಕೊಡಬೇಕೆಂಬ ನಿಯಮವಿದೆ. ಇದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬುದು ಇಸ್ಮಾಯಿಲ್ ಅಭಿಪ್ರಾಯ.
ಸಾಮಾಜಿಕ ಕಳಕಳಿಯ ವ್ಯಕ್ತಿ: ಪುಸ್ತಕಪ್ರಿಯ ಇಸ್ಮಾಯಿಲ್ ವ್ಯಾಪಾರದ ಜತೆ ಸಮಾಜಮುಖಿಯಾಗಿ ಚಿಂತನೆ ಮಾಡಿದವರು. ಸ್ಥಳೀಯವಾಗಿ ಯಾರಾದರೂ ಅಪಘಾತಕ್ಕೀಡಾಗಿ, ಅನಾರೋಗ್ಯಕೀಡಾಗಿ ಸಂಕಷ್ಟದಲ್ಲಿದ್ದರೆ ಅವರಿಗೆ ಇಸ್ಮಾಯಿಲ್ ನೆರವು ಮಾಡುತ್ತಾರೆ. ಬಡ ಹುಡುಗಿಯರ ಮದುವೆಗೆ ಸಹಾಯಹಸ್ತ ಚಾಚಿದ್ದಾರೆ.
Be the first to comment on "ಗುಜರಿಗೆ ಸೇರಬೇಕಾಗಿದ್ದ ಪುಸ್ತಕಗಳು ತಿಜೋರಿಗೆ"