ಪದ್ಯಾಣ ಪ್ರಶಸ್ತಿಗೆ ಭಾಗವತದ್ವಯರಾದ ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆ

ಅಕ್ಟೋಬರ್ 23ರಂದು ಪ್ರದಾನ

ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯ ಹಾಗೂ ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ‘ಪದ್ಯಾಣ ಪ್ರಶಸ್ತಿ’ಗೆ ಆಯ್ಕೆಗೊಂಡಿದ್ದಾರೆ. ಕೀರ್ತಿಶೇಷ ಭಾಗವತ ಪದ್ಯಾಣ ಗಣಪತಿ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಅಕ್ಟೋಬರ್ 23, ರವಿವಾರದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ’ಶ್ರೀ ನಟರಾಜ’ ವೇದಿಕೆಯಲ್ಲಿ ನಡೆಯುವ ಪದ್ಯಾಣ ಸ್ಮೃತಿ ’ಗಾನ ಗಣಪತಿ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಚಿತ್ತೈಸಲಿದ್ದಾರೆ.

ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷ, ಕಲಾಪೋಷಕ ಡಾ.ಟಿ.ಶ್ಯಾಮ್ ಭಟ್ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಸಂಪನ್ನವಾಗಲಿದೆ. ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ ಮುಖ್ಯ ಅತಿಥಿಗಳು. ಪದ್ಯಾಣ ಗಣಪತಿ ಭಟ್ಟರ ಸ್ಮೃತಿಯನ್ನು ಯಕ್ಷ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮಾಡಲಿದ್ದಾರೆ. ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯ ಶ್ರೀ ವೆಂಕಟರಾಮ ಭಟ್ಟರು ಪ್ರಶಸ್ತಿ ಪುರಸ್ಕೃತರನ್ನು ನುಡಿಹಾರಗಳ ಮೂಲಕ ಅಭಿನಂದಿಸಲಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಹನುಮಗಿರಿ ಮೇಳದ ಭಾಗವತ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ’ಪದ್ಯಾಣ ಶಿಷ್ಯ ಸಂಮಾನ’ ಹಾಗೂ ಯಕ್ಷಗಾನ ಅರ್ಥದಾರಿ ಶ್ರೀ ರಾಮ ಜೋಯಿಸ್ ಬೆಳ್ಳಾರೆ ಅವರಿಗೆ ’ಅಭಿಮಾನಿ ಶಿಷ್ಯ ಸಂಮಾನ’ವನ್ನು ನೀಡಲಾಗುತ್ತದೆ. ದಿನಪೂರ್ತಿ ನಡೆಯುವ ಕಲಾಪದಲ್ಲಿ ಯಕ್ಷಗಾನ ವಾದ-ಸಂವಾದ, ಗಾನ ವೈಭವ, ನೃತ್ಯ ವೈಭವ, ಪ್ರದರ್ಶನ.. ಹೀಗೆ ವೈವಿಧ್ಯ ಕಾರ್ಯಹೂರಣ ಸಂಪನ್ನವಾಗಲಿದೆ ಎಂದು ಸಮಿತಿಯ ಸ್ವಸ್ತಿಕ್ ಪದ್ಯಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.