ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಭಾನುವಾರ ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ ಡಾಟ್ ಕಾಮ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಶುದ್ದೀನ್ ಎಣ್ಮೂರು ಅವರಿಗೆ ಬಿ.ಜಿ.ಮೋಹನದಾಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಕವಿಗೋಷ್ಠಿ ನಡೆಯಿತು.
ವೆಬ್ ಸೈಟ್ ಗಳಲ್ಲಿ ಪ್ರಕಟವಾಗುವ ಅತ್ಯುತ್ತಮ ವರದಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಗಲ್ಫ್ ಕನ್ನಡಿಗ ಡಾಟ್ ಕಾಮ್ ಸಂಸ್ಥಾಪಕ ಬಿ.ಜಿ.ಮೋಹನದಾಸ್ ನೆನಪಿಗೆ ನೀಡಲಾಗುತ್ತಿದ್ದು, ಇದು ಎರಡನೇ ಕಾರ್ಯಕ್ರಮವಾಗಿದೆ. ಕಳೆದ ಬಾರಿ ವಾರ್ತಾಭಾರತಿ ಪತ್ರಿಕೆಯ ಇಮ್ತಿಯಾಜ್ ಶಾ ತುಂಬೆ ಅವರಿಗೆ ಪ್ರಶಸ್ತಿ ಲಭಿಸಿತ್ತು. ಕನ್ನಡದ ಡಿಜಿಟಲ್ ಮಾಧ್ಯಮಗಳಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಗಲ್ಫ್ ಕನ್ನಡಿಗ ಡಾಟ್. ಕಾಮ್ ‘ನಿರತ’ ಜೊತೆಗೂಡಿ ಆರಂಭಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಬಿ.ಜಿ.ಮೋಹನ್ ದಾಸ್ ಅವರ ಸಹೋದರ, ಉಡುಪಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಜಂಟಿ ಕಾರ್ಯದರ್ಶಿ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್ ಮಾತನಾಡಿ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ, ಸಮಾಜದಿಂದ ಸಂಕಷ್ಟದಲ್ಲಿ ಇರುವ, ಮುಖ್ಯವಾಹಿನಿಯಿಂದ ದೂರ ಉಳಿದವರ ಬಗ್ಗೆ ಬಿ.ಜಿ ಮೋಹನ್ ದಾಸ್ ಅವರು ಅಪಾರ ಕಾಳಜಿ ವಹಿಸುತ್ತಿದ್ದರು. ಅವರ ಹೆಸರಿನಲ್ಲಿ ಪ್ರದಾನಿಸುವ ಪ್ರಶಸ್ತಿ ಕೊರಗರ ಬಗೆಗಿನ ಲೇಖನ ಆಯ್ಕೆಯಾಗಿರುವುದು ಅವರಿಗೆ ಸಂದ ಗೌರವವಾಗಿದೆ ಎಂದರು.
ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಬ್ರಿಜೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸುಕೇಶ್ ಕುಮಾರ್ ಶೆಟ್ಟಿ ಬಿ.ಜಿ.ಮೋಹನ್ ದಾಸ್ ಅವರ ಪರಿಚಯ ಭಾಷಣ ಮಾಡಿದರು. ಉಪನ್ಯಾಸಕ ಅಬ್ದುಲ್ ಮಜೀದ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಉಪಸ್ಥಿತರಿದ್ದರು. ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾದ ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಪ್ರಶಸ್ತಿ ಗೆ ಪಾಲ್ಗೊಂಡ ವರದಿಗಳ ಬಗ್ಗೆ ವಿಶ್ಲೇಷಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬಿ.ಎಂ.ತುಂಬೆ ಉದ್ಘಾಟಿಸಿದರು. ರಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಡಾ | ಮೈತ್ರಿ ಭಟ್, ಮಹೇಂದ್ರನಾಥ್ ಸಾಲೆತ್ತೂರು , ತುಳಸಿ ಕೈರಂಗಳ್ , ಸುಹಾನ ಸೈಯ್ಯದ್ , ದೀಪ್ತಿ ಪಿ, ಫಾತಿಮಾ ಪರ್ವೀನ್, ಶಶಿಕಲಾ ಭಾಸ್ಕರ್, ನಳಿನಿ ಬಿ ರೈ ಮಂಚಿ, ವಿಶ್ವನಾಥ್ ಕುಲಾಲ್ ಮಿತ್ತೂರು , ಆಶೋಕ್ ಎನ್ ಕಡೇಶ್ವಾಲ್ಯ ,ಖತೀಜತುಲ್ ನಝೀಲ, ಸಂಧ್ಯಾ ಕುಮಾರಿ ಎಸ್ , ಮಹಿಮಾ ಆರ್ ಕೆ, ನಂದಿತಾ ವಿಟ್ಲ ಕವನ ವಾಚಿಸಿದರು. ಮಹಮ್ಮದ್ ತುಂಬೆ ಉಪಸ್ಥಿತರಿದ್ದರು. ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ಸಹಶಿಕ್ಷಕಿ ಸುಧಾ ನಾಗೇಶ್ ಸ್ವಾಗತಿಸಿದರು. ಕರುಣಾಕರ ಮಾರಿಪಳ್ಳ ಧನ್ಯವಾದಗೈದರು. ಬಿ.ಎಂ.ರಫೀಕ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳದಲ್ಲಿ ಬಿ.ಜಿ.ಮೋಹನದಾಸ್ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ"