ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇಪು ಎಂಬಲ್ಲಿ ಶುಕ್ರವಾರ ಬೆಳಗಿನ ವೇಳೆ ಆಲ್ಟೊ ಕಾರಿನಲ್ಲಿ ಗೋಸಾಗಾಟ ಮಾಡುತ್ತಿರುವುದನ್ನು ಸ್ಥಳೀಯರು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ. ಇದೀಗ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಿಗ್ಗೆ ಸಮಯ ಸುಮಾರು 6.15 ಗಂಟೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಬೀಜದಡ್ಕ ಎಂಬಲ್ಲಿ ಅಲ್ಟೋ ಕಾರಿನಲ್ಲಿ ಚಾಲಕ ಹಾಗೂ ಅದರಲ್ಲಿದ್ದ ಇನ್ನೋರ್ವ ಕಪ್ಪು ಬಣ್ಣದ ಹಾಗೂ ಬಿಳಿ ಕೆಂಪು ಮಿಶ್ರಿತ ಬಣ್ಣದ ಹೋರಿಗಳನ್ನು ಎಲ್ಲಿಂದಲೋ ತೆಗೆದುಕೊಂಡು ಬಂದು ಅದನ್ನು ಕಾರಿನಲ್ಲಿ ತುಂಬಿ ಕುತ್ತಿಗೆ ಮತ್ತು ಅವುಗಳ ಕಾಲುಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಯಾವುದೇ ಪರವಾನಿಗೆ ಇಲ್ಲದೆ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದು, ಕಾರು ಕೆಟ್ಟು ನಿಂತಾಗ ಆರೋಪಿಗಳು ಪರಾರಿಯಾಗಿದ್ದಾರೆ. ಗ್ರಾಮಸ್ಥರು ಕಾರಿನ ಒಳಗಿದ್ದ ಜಾನುವಾರುಗಳನ್ನು ಕಾರಿನ ಗಾಜುಗಳನ್ನು ಒಡೆದು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಗೋಸಾಗಾಟ, ಹತ್ಯೆ ಮಾಡುವವರ ಆಸ್ತಿ ಮುಟ್ಟುಗೋಲು ಹಾಕಿ, ಅವರು ಶಾಶ್ವತವಾಗಿ ಜೈಲಿನಲ್ಲಿರುವಂತೆ ಮಾಡಿರಿ ಎಂದು ಪೊಲೀಸ್ ಇಲಾಖೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ಮಾಡುವುದು ಇನ್ನೂ ಅವ್ಯಾಹತವಾಗಿ ನಡೆಯುತ್ತಿದ್ದು, ತನ್ನ ಕ್ಷೇತ್ರದಲ್ಲಿ ಅಕ್ರಮ ಗೋಸಾಗಾಟ ಪ್ರಕರಣವೊಂದು ಪತ್ತೆಯಾಗಿದೆ. ಆರೋಪಿಗಳ ಪತ್ತೆ ಹಚ್ಚಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಂಡು ಆರೋಪಿಗಳು ಜೈಲಿನಿಂದ ಹೊರಬಾರದಂತೆ ಕೇಸು ದಾಖಲಿಸಲು ಅವರು ಹೇಳಿದರು.
Be the first to comment on "ಕಾರಿನಲ್ಲಿ ಗೋಸಾಗಾಟ ಪತ್ತೆ, ಕಠಿಣ ಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಸೂಚನೆ"