ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೇಲ್ಯಪಲ್ಕೆ ಪಕ್ಕದ ಮುಕ್ಕುಡ ಎಂಬಲ್ಲಿ ಭೂಕುಸಿತ ಉಂಟಾದ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮತ್ತು ಎಸ್ಪಿ ಋಷಿಕೇಶ್ ಸೋನಾವಣೆ ಭೇಟಿ ನೀಡಿದ್ದಾರೆ, ಮನೆಯೊಂದರ ಮೇಲೆ ಮಣ್ಣು ಜರಿದು, ನಾಲ್ವರು ಕೇರಳ ಮೂಲದ ಕಾರ್ಮಿಕರು ಸಿಲುಕಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಗುತ್ತಿದೆ. ಇವರಲ್ಲಿ ಮೂವರನ್ನು ಹೊರತೆಗೆಯಲಾಗಿದ್ದು, ಶೌಚಾಲಯದಲ್ಲಿ ಸಿಲುಕಿರುವ ಕಾರ್ಮಿಕನನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ ಬಿಜು ಎಂಬಾತನನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮತ್ತಿಬ್ಬರನ್ನು ವಿವಿಧ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇತ್ತೀಚಿನ ವರದಿಯಂತೆ ಓರ್ವ ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮತ್ತೋರ್ವನನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.ಕೇರಳದ ಪಾಲಕ್ಕಾಡ್ ನಿವಾಸಿ ಬಿಜು (45) ಸಾವನ್ನಪ್ಪಿದವರು. ಕಣ್ಣೂರಿನ ಜಾನಿ (44) ಮತ್ತು ಕೊಟ್ಟಾಯಂನ ಬಾಬು (46) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲಪ್ಪುರದ ಸಂತೋಷ್ (46) ಎಂಬಾತನ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಎಸ್ಪಿ ಋಷಿಕೇಶ್ ಸೋನಾವಣೆ, ಸಹಾಯಕ ಕಮೀಷನರ್ ಮದನ್ ಮೋಹನ್, ತಹಸೀಲ್ದಾರ್ ಡಾ. ಸ್ಮಿತಾ ರಾಮು, ಪೊಲೀಸ್, ಕಂದಾಯ, ಅಗ್ನಿಶಾಮಕ, ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಇದ್ದು, ರಕ್ಷಣಾ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ. ಗ್ರಾಪಂ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಸುದರ್ಶನ್ ಜೈನ್ ಸಹಿತ ನೂರಾರು ಸ್ಥಳೀಯರು ಮಣ್ಣು ತೆರವುಗೊಳಿಸಿ ಕಾರ್ಮಿಕರನ್ನು ಹೊರತೆಗೆಯಲು ನೆರವಾದರು. ಸುರಿಯುವ ಮಳೆಯಲ್ಲೂ ರಕ್ಷಣಾ ಕಾರ್ಯ ನಡೆಯುತ್ತಿದೆ.
Be the first to comment on "ಪಂಜಿಕಲ್ಲು ಭೂಕುಸಿತ: ಮಣ್ಣಿನಡಿ ಸಿಲುಕಿದ ಕಾರ್ಮಿಕರು, ಸ್ಥಳಕ್ಕೆ ಡಿಸಿ ಭೇಟಿ, ಓರ್ವ ಮೃತ್ಯುವಶ"