ಬಂಟ್ವಾಳ: ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದವರಿಗೆ ದೊಡ್ಡ ಸವಾಲು, ಇದನ್ನು ಸಮರ್ಥವಾಗಿ ನಿಭಾಯಿಸಿ, ಮನೆಮಂದಿಯೊಂದಿಗೆ ಖುಷಿಯಿಂದಿರಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ, ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಬೆಳ್ತಂಗಡಿ ವಿಸ್ತರಣ ಕಾರ್ಯಕ್ರಮದ ಅಂಗವಾಗಿ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಎಂಟು ದಿನಗಳ ಕಾಲ ನಡೆದ 1540ನೇ ಮಧ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು. ನಿಮ್ಮನ್ನು ಅವಮಾನಿಸುವವರು, ಹಂಗಿಸುವವರು ಇರಬಹುದು ಆದರೆ ಧೃತಿಗೆಡದೆ ಮುನ್ನಡೆಯಿರು, ಮತ್ತೆ ಮದ್ಯದ ದಾಸರಾಗಬೇಡಿ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶುಭ ಹಾರೈಸಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ರೊನಾಲ್ಡ್ ಡಿಸೋಜಾ, 1540ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಡಾ. ವಸಂತ ಬಾಳಿಗ, ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು. ಸಮಿತಿಯ ಗೌರವ ಸಲಹೆಗಾರ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮನ್ಮಥ ರಾಜ್ ಜೈನ್ ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕುಟುಂಬ ದಿನ ನಡೆಸಿಕೊಟ್ಟರು.ಜಿಲ್ಲಾ ನಿರ್ದೇಶಕ, ವ್ಯವಸ್ಥಾಪನ ಸಮಿತಿಯ ಪ್ರಧಾನ ಸಂಚಾಲಕ ಸತೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ, ಶಿಬಿರದ ಸಂಚಾಲಕ ಜಯಾನಂದ ಪಿ., ವಂದಿಸಿದರು, ಉಡುಪಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ತಿಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕರಾದ ಅಮಿತಾ, ಕೇಶವ, ವೇದಾವತಿ, ಮಮತಾ ಸಹಕರಿಸಿದರು. ಸೇವಾಪ್ರತಿನಿಧಿಗಳು, ಪ್ರಗತಿಬಂಧು ಸ್ವಸಹಾಯ ಗುಂಪಿನ ಸದಸ್ಯರು, ನವಜೀವನ ಸಮಿತಿ ಸದಸದ್ಯರು, ಶಿಬಿರಾರ್ಥಿಗಳ ಕುಟುಂಬ ಬಂಧುಗಳು ಉಪಸ್ಥಿತರಿದ್ದರು.
Be the first to comment on "ಮದ್ಯವರ್ಜನ ಶಿಬಿರಾರ್ಥಿಗಳಿಗೆ ಡಾ. ಹೆಗ್ಗಡೆ ಸಲಹೆ: ಮತ್ತೆ ಕುಡಿತದ ಆಕರ್ಷಣೆಗೆ ಮರುಳಾಗದಿರಿ…"