ಬಂಟ್ವಾಳ: ದೇಶದಲ್ಲಿ 65 ಶೇ.ದಷ್ಟಿರುವ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆಗಳ ಮಾಹಿತಿಯನ್ನು ಬಿಜೆಪಿ ಕಾರ್ಯಕರ್ತರು ಪ್ರತಿ ರೈತರ ಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಮೋದಿ ಆಡಳಿತದ 8ರ ಸಂಭ್ರಮಾಚರಣೆಯ ಭಾಗವಾಗಿ ಬಂಟ್ವಾಳ ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆದ ರೈತ ಸಮ್ಮಾನ್ ಸಮಾವೇಶವನ್ನು ಉದ್ಘಾಟಿಸಿದರು.
ಕಿಸಾನ್ ಸಮ್ಮಾನ್‌ಯೋಜನೆಯು ಬಂಟ್ವಾಳ ಕ್ಷೇತ್ರದಲ್ಲಿ 25,183 ರೈತರನ್ನು ತಲುಪಿದ್ದು, ಬೂತ್ ಲೆಕ್ಕಾಚಾರ ಹಾಕಿದರೆ ಪ್ರತಿ ಬೂತ್‌ನಲ್ಲಿ 117 ಮಂದಿಗೆ ಯೋಜನೆ ತಲುಪಿದಂತಾಗುತ್ತದೆ. ಫಸಲ್ ಭಿಮಾ ಯೋಜನೆಯಲ್ಲಿ 2019-20ರಲ್ಲಿ 5.96 ಕೋ.ರೂ. ಹಾಗೂ 2020-21ರಲ್ಲಿ 9.82 ಕೋ.ರೂ.ಸೇರಿ ಒಟ್ಟು 15.85 ಕೋ.ರೂ. ಬಂಟ್ವಾಳದ ರೈತರನ್ನು ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ವಿದ್ಯಾವಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ 2ರಿಂದ 11 ಸಾವಿರ ರೂ.ತನಕ ವಿದ್ಯಾರ್ಥಿ ವೇತನ ನೀಡಿದ್ದು, ಬಂಟ್ವಾಳದಲ್ಲಿ 63 ಲಕ್ಷ ರೂ. ಮೊತ್ತ ವಿದ್ಯಾರ್ಥಿಗಳನ್ನು ತಲುಪಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಮೋದಿ ಆಡಳಿತದ ಸಂಭ್ರಮದ ನಡುವೆ ಸೇವೆ, ಸುಶಾಸನ, ಬಡವರ ಕಲ್ಯಾಣ ಎಂಬ ಕಲ್ಪನೆಯಲ್ಲಿ ಕೇಂದ್ರದ ಯೋಜನೆ ಜನರ ಮನೆಗೆ ತಲುಪಿಸಬೇಕಿದೆ. ಅಟಲ್ ಜೀ ಕಂಡ ಸುಶಾಸನದ ಕಲ್ಪನೆಯನ್ನು ಪ್ರಧಾನಿ ಮೋದಿಯವರು ನನಸು ಮಾಡಿದ್ದಾರೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಅವರು ಮೋದಿ ಆಡಳಿತ ಯೋಜನೆಗಳನ್ನು ವಿವರಿಸಿದರು. ಕಳೆದ ಕೆಲವು ದಿನಗಳ ಹಿಂದೆ ನಿಧನ ಹೊಂದಿದ ಪಕ್ಷದ ಕಾರ್ಯಕರ್ತ ಹರೀಶ್ ಪ್ರಭು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೆಳ್ಳೂರು, ಪ್ರಧಾನ ಕಾರ್ಯದರ್ಶಿ ವಸಂತ ಅಣ್ಣಳಿಕೆ ಉಪಸ್ಥಿತರಿದ್ದರು. ಬಂಟ್ವಾಳ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ವಿಶ್ವನಾಥ ಕಟ್ಟತ್ತಿಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಿವಪ್ಪ ಗೌಡ ವಂದಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ರೈತರ ಆದಾಯವೃದ್ಧಿಗೆ ಕೇಂದ್ರದಿಂದ ಹಲವು ಯೋಜನೆ: ರಾಜೇಶ್ ನಾಯ್ಕ್"