ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ಬಂಟ್ವಾಳ ತಾಲೂಕಿನ ವಿದ್ಯಾಗಿರಿಯ ಅರ್ಬಿಗುಡ್ಡೆಯಲ್ಲಿ ನಿರ್ಮಿಸಲಾದ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರವನ್ನು ಇಂಧನ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಸಬ್ ಸ್ಟೇಶನ್ ಗಳನ್ನು ಹೆಚ್ಚು ನಿರ್ಮಾಣ ಮಾಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನದೊಂದಿಗೆ ಗ್ಯಾಸ್ ಇನ್ಸುಲೇಟೆಡ್ ವಿತರಣಾ ಕೇಂದ್ರಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂಟ್ವಾಳ, ಊರ್ವ, ಕೋಟ ಮತ್ತು ಉದ್ಯಾವರಗಳಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗಿದ್ದು, ಪ್ರಥಮವಾಗಿ 11 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕೇಂದ್ರದ ಉದ್ಘಾಟನೆ ನಡೆದಿದೆ. ಏಳು ತಿಂಗಳ ಅವಧಿಯಲ್ಲಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ಮೂಲಕ ವಿದ್ಯುತ್ ಪೂರೈಕೆ ನಿರಂತರವಾಗಿರಲು ದೊಡ್ಡ ಪ್ರಮಾಣದಲ್ಲಿ ಸಬ್ ಸ್ಟೇಶನ್ ನಿರ್ಮಿಸಲಾಗುವುದು ಎಂದರು.
ಕಲ್ಲಿದ್ದಲಿನ ಕೊರತೆ ರಾಜ್ಯಕ್ಕೆ ಆಗದಂತೆ ಕ್ರಮಕೈಗೊಳ್ಳಲಾಗಿದ್ದು, ನಿರಂತರ ಸರಬರಾಜು ಆಗುತ್ತಿದೆ. ಇಲಾಖೆಯಲ್ಲಿ ಹೊಸದಾಗಿ 899 ಪವರ್ ಮ್ಯಾನ್ ಗಳ ನೇಮಕಾತಿ ಆಗಿದ್ದು ,600ಕ್ಕೂ ಅಧಿಕ ಮಂದಿ ಮೆಸ್ಕಾಂನಲ್ಲೇ ಆಗಿದೆ. 1500 ಮಂದಿಗೆ ಕೆಪಿಟಿಸಿಎಲ್ ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮುಂದಿನ ಜೂನ್ ನಲ್ಲಿ ಪರೀಕ್ಷೆ ನಡೆಯಲಿದೆ. ಪವರ್ ಮ್ಯಾನ್ ಗಳಿಗೆ ಇದ್ದ20 ಲಕ್ಷ ರೂಗಳ ಜೀವವಿಮೆ ಈಗ 40 ಲಕ್ಷಕ್ಕೇರಿಸಲಾಗಿದೆ ಎಂದರು.
1000 ಚಾರ್ಜಿಂಗ್ ಪಾಯಿಂಟ್: ಜೂನ್ ಮೊದಲನೇ ವಾರದಲ್ಲಿ ವಿದ್ಯುತ್ ಚಾರ್ಜಿಂಗ್ ಸೆಂಟರ್ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಮೈಸೂರಿನಲ್ಲಿ ಇದಕ್ಕೆ ಸಂಬಂಧಿಸಿ ಕೆಲಸ ಆರಂಭಗೊಂಡಿದೆ. ಒಂದು ಸಾವಿರ ಚಾರ್ಜಿಂಗ್ ಸೆಂಟರ್ ಅನ್ನು ಆರಂಭಿಕವಾಗಿ ಪ್ರಾರಂಭಿಸುವ ಗುರಿ ಇದೆ ಎಂದು ಸಚಿವರು ಈ ಸಂದರ್ಭ ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ತನ್ನ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಯಾಸ್ ಇನ್ಸುಲೇಟೆಡ್ ವಿತರಣಾ ಕೇಂದ್ರ ಆರಂಭಗೊಳ್ಳಲು ಮಾಡಿದ ಪ್ರಯತ್ನಕ್ಕೆ ಯಶಸ್ಸು ದೊರಕಿದೆ ಎಂಬುದು ಸಂತಸದ ವಿಚಾರ ಎಂದರು.
ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಎಂಇಐಎಲ್ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪುರಸಭಾ ಸದಸ್ಯ ಗಂಗಾದರ ಪೂಜಾರಿ, ಹರಿಪ್ರಸಾದ್, ದ.ಕ.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಡಿ.ಪದ್ಮಾವತಿ, ಪ್ರಭಾರ ಮುಖ್ಯ ಇಂಜಿನಿಯರ್ ಹರೀಶ್ ಕುಮಾರ್, ಪ್ರಭಾರ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ, ಪುತ್ತೂರು ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಪೈ ಎಂ.ಜೆ, ಎಇಇ ನಾರಾಯಣ ಭಟ್, ಬೆಳ್ತಂಗಡಿ ಎಇಇ ಶಿವಶಂಕರ್ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ್ ಶೆಟ್ಟಿ, ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ ಅರಳ, ಅಭಿಷೇಕ್ ಶೆಟ್ಟಿ, ಗಣೇಶ್ ಸುವರ್ಣ, ಮಹೇಶ್ ತುಪ್ಪೆಕಲ್ಲು, ಪುಷ್ಪರಾಜ್ ಚೌಟ, ಸುಕೇಶ್ ಚೌಟ, ಸುದರ್ಶನ ಬಜ, ಸೀಮಾ ಮಾಧವ, ಪುರುಷೋತ್ತಮ ಶೆಟ್ಟಿ ವಾಮದಪದವು, ಉದಯಕುಮಾರ್ ರಾವ್, ಗಣೇಶ್ ದಾಸ್, ಮಹೇಶ್ ಶೆಟ್ಟಿ, ಕೇಶವ ದೈಪಲ, ನಂದರಾಮ ರೈ, ಯಶೋಧರ ಕರ್ಬೆಟ್ಟು ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳದಲ್ಲಿ ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿದ ಇಂಧನ ಸಚಿವ ಸುನಿಲ್ ಕುಮಾರ್"