ತಗ್ಗುಪ್ರದೇಶ, ಬೀಚ್, ಕೆರೆ ಬದಿ ತೆರಳದಂತೆ ಸೂಚನೆ
![](https://i0.wp.com/bantwalnews.com/wp-content/uploads/2022/05/WhatsApp-Image-2022-05-16-at-8.05.33-PM-1.jpeg?resize=777%2C1015&ssl=1)
![](https://i0.wp.com/bantwalnews.com/wp-content/uploads/2022/05/WhatsApp-Image-2022-05-16-at-5.13.29-PM.jpeg?resize=777%2C583&ssl=1)
![](https://i0.wp.com/bantwalnews.com/wp-content/uploads/2022/05/WhatsApp-Image-2022-05-12-at-1.21.08-PM.jpeg?resize=723%2C1024&ssl=1)
![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2021/01/Bantwalnews-1.jpg?resize=777%2C392&ssl=1)
ಮಂಗಳೂರು: ಶಾಲಾರಂಭದ ದಿನವೇ ಮಕ್ಕಳನ್ನು ಮಳೆ ಕಾಡಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕ ಕರಾವಳಿ ಭಾಗದಲ್ಲಿ ಭಾರಿ ಮಳೆ ಇನ್ನೂ ಇದೆ. ಮೇ 17 ಮತ್ತು 19ರಂದು ಆರೆಂಜ್ ಅಲರ್ಟ್ ಮತ್ತು 18ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಪ್ರತಿದಿನ ತಲಾ 100 ಮಿ.ಮೀನಿಂದ 150 ಮಿ.ಮೀ.ಗೂ ಮೇಲ್ಪಟ್ಟು ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಬೇಕು. ಪ್ರವಾಸಿಗರು, ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ ಹೊರಡಿಸಿದ್ದಾರೆ.
ಬಂಟ್ವಾಳ ತಾಲೂಕಿನಾದ್ಯಂತ ಬೆಳಗ್ಗೆ ಹನಿಮಳೆ ಇದ್ದರೆ, ಮಧ್ಯಾಹ್ನದ ಬಳಿಕ ಬಿ.ಸಿ.ರೋಡ್ ಸಹಿತ ಹಲವೆಡೆ ಧಾರಾಕಾರ ಮಳೆ ಸುರಿಯುತು. ಪೇಟೆಯಿಡೀ ಕೃತಕ ನೆರೆಯಿಂದ ಕೆಸರುಮಿಶ್ರಿತ ನೀರಿನಿಂದ ಆವೃತವಾದರೆ, ರಸ್ತೆಯಂಚಿನಲ್ಲಿ ನಿಲ್ಲಲೂ ಆಗದ ಸ್ಥಿತಿ ನಿರ್ಮಾಣಗೊಂಡಿತು. ಇದರಿಂದ ಶಾಲೆ ಬಿಟ್ಟು ಮನೆಗೆ ತೆರಳುವ ಮಕ್ಕಳು ಪರದಾಟ ಅನುಭವಿಸಬೇಕಾಯಿತು. ಬಿ.ಸಿ.ರೋಡಿನ ಕೈಕಂಬದಿಂದ ಪೊಳಲಿ ಕಡೆಗೆ ತಿರುಗುವ ಜಾಗದಲ್ಲಿ ರಸ್ತೆಯೇ ಕಾಣಸಿಗಿಲ್ಲ. ಚರಂಡಿಗಳು ಸಂಪೂರ್ಣ ಹೂಳೆತ್ತದ ಕಾರಣ ಸಮಸ್ಯೆ ಅನುಭವಿಸಬೇಕಾಯಿತು. ಅದೇ ರೀತಿ ಹಲವು ವಸತಿ ಬಡಾವಣೆಗಳಲ್ಲೂ ಪುರಸಭೆಯ ಚರಂಡಿ ಹೂಳೆತ್ತದ ಪರಿಣಾಮ ರಸ್ತೆಯಲ್ಲಿಡೀ ನೀರು ಹರಿದಿದೆ.
ಸೋಮವಾರ ಸುರಿದ ಭಾರಿ ಮಳೆಗೆ ವಿಟ್ಲ ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆಯಾದ ಘಟನೆ ನಡೆಯಿತು. ವಿಟ್ಲ-ಮಂಗಳೂರು ರಸ್ತೆಯಲ್ಲಿ ಕೃತಕ ಪ್ರವಾಹದಿಂದ ವಾಹನ ಚಾಲಕ ಮಾಲಕರು ದ್ವಿಚಕ್ರ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.
ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ಸೋಮವಾರ ರಾತ್ರಿ ಬೃಹತ್ ಮರವೊಂದು ರಸ್ತೆಗೆ ಉರುಳಿದೆ. ಪರಿಣಾಮ ನರಿಕೊಂಬು ಪಾಣೆಮಂಗಳೂರು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನರಿಕೊಂಬಿಗೆ ಹೆದ್ದಾರಿಯಿಂದ ತೆರಳುವವರು ಪರ್ಯಾಯ ರಸ್ತೆಯನ್ನು ಅವಲಂಬಿಸಬೇಕಾಯಿತು.
Be the first to comment on "ಶಾಲಾರಂಭದ ದಿನವೇ ಕಾಡಿದ ಮಳೆ – ಮುಂದಿನ ಮೂರು ದಿನ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ"