FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ : ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಏ.29ರಿಂದ ಮೇ.5ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನವು ಸುಮಾರು ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಎ.೨೯ರಿಂದ ಮೇ ೫ರವರೆಗೆ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿರುವ ಬಿ.ರಮಾನಾಥ ರೈ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ, ಕ್ಷೇತ್ರದ ತಂತ್ರಿ ವೇ.ಮೂ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ಕಲಶೋತ್ಸವ ಸಂಪನ್ನಗೊಳ್ಳಲಿದೆ ಎಂದು ಅವರು ಹೇಳಿದರು. ಎ.29ರಂದು ಭಾನುವಾರ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ವಿವಿಧ ಸ್ವಾಮೀಜಿಗಳು, ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಲಿರುವರು. ಬಿ.ಸಿ. ರೋಡ್ ಶ್ರೀ ರಕ್ತೇಶ್ವರೀ ದೇವಸ್ಥಾನದಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ, ದೇವರ ಪ್ರಧಾನ ವಿಗ್ರಹಗಳು, ಪ್ರಧಾನ ಕಲಶ(ಮುಗುಳಿ), ಉತ್ಸವಮೂರ್ತಿ, ಪುಷ್ಪ ಕನ್ನಡಿ, ಪ್ರಭಾವಳಿ ಸಹಿತ ಇಳಿಯೂರಿಗೆ ಸಾಗಲಿದೆ. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಸರೋವರ ಪಂಪಿಗೆ ಚಾಲನೆ, ಶೌಚಾಲಯ ಉದ್ಘಾಟನೆ,ಸಂಜೆ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.ರಾತ್ರಿ ಕಟೀಲು ಮೇಳದವರಿಂದ ಯಕ್ಷಗಾನ ನಡೆಯಲಿದೆ.
ಎ.30 ರಂದು ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ . ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಲಿರುವರು.
ಮೇ 4ರಂದು ಬೆಳಗ್ಗೆ ಗಂಟೆ ೭.೪೫ರ ಮೃಗಶಿರ ನಕ್ಷತ್ರ ವೃಷಭ ರಾಶಿ ಶುಭ ಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ಪರಿವಾರ ದೈವಗಳ ಪ್ರತಿಷ್ಠೆ, ಪರಿ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ರಾತ್ರಿ ಜನಾನ್ ದೈವ, ಪಂಜುರ್ಲಿ, ಪೊಟ್ಟ ಪಂಜುರ್ಲಿ, ಮತ್ತು ಕಲ್ಲುರ್ಟಿ ದೈವಗಳಿಗೆ ನೇಮೊತ್ಸವ ನಡೆಯಲಿದೆ.
ಮೇ ೫ರಂದು ಶ್ರೀ ಕೊಡಮಣಿತ್ತಾಯ, ರಕ್ತೇಶ್ವರಿ, ಕಲ್ಕುಡ ಕಲ್ಲುರ್ಟಿ, ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಪ್ರತಿದಿನ ಧಾರ್ಮಿಕ ಸಭೆ ನಡೆಯಲಿದ್ದು, ಸಾಧು , ಸಂತರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು, ಪ್ರತಿದಿನ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು,ಅನ್ನ ಸಂತರ್ಪಣೆ ನಡೆಯಲಿದೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಪದ್ಮಶೇಖರ ಜೈನ್, ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್‌ಗುತ್ತು, ಪ್ರ.ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟದಡ್ಕ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ಲಾವಣ್ಯ ಬಲ್ಲಾಳ್, ಪ್ರ.ಕಾರ್ಯದರ್ಶಿ ಶಿವರಾಮ ಶೆಟ್ಟಿ ದೋಟ, ಟ್ರಸ್ಟಿ ರವೀಂದ್ರ, ಬೇಬಿ ಕುಂದರ್ ಉಪಸ್ಥಿತರಿದ್ದರು.
Be the first to comment on "ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಏ.29ರಿಂದ ಮೇ.5ರವರೆಗೆ ಬ್ರಹ್ಮಕಲಶೋತ್ಸವ"