www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಸ್ಥಾಪಕರಲ್ಲೋರ್ವರಾದ ಸಮಾಜ ಸೇವಾ ರತ್ನ ,ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಅವರ 100 ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ” ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022″ ಕಾರ್ಯಕ್ರಮವು ಬಂಟ್ವಾಳ ಬೈಪಾಸ್ ನಲ್ಲಿರುವ ಸಂಘದ ಕಚೇರಿ ಸಭಾಭವನದಲ್ಲಿ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದ ನಳಿನ್ ಕುಮಾರ ಕಟೀಲ್ ಅವರು ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022″ನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು,ಶ್ರೇಷ್ಠ ಸಾಧಕರಾದ ಡಾ.ಅಮೆಂಬಳ ಬಾಳಪ್ಪರವರ ತತ್ವಾದರ್ಶಗಳು ಇಂದಿಗೂ ನಮಗೆಲ್ಲಾ ಸ್ಪೂರ್ತಿಯಾಗಿದ್ದು,ಅವರ ದೂರದೃಷ್ಟಿಯ ಯೋಚನೆ,ಕನಸುಗಳನ್ನು ನನಸು ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಸ್ಮರಣೆಯಾಗಿದೆ ಎಂದರು.
ಡಾ. ಅಮ್ಮೆಂಬಳ ಬಾಳಪ್ಪರಂತಹ ಹೋರಾಟಗಾರರ ನಿಸ್ವಾರ್ಥ ಸೇವೆಯ ಫಲವಾಗಿ ನಾವಿಂದು ಸಂತೋಷದ ಜೀವನ ಸಾಗಿಸುತ್ತಿದ್ದು, ಅವರು ನಮ್ಮ ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ಸಮಾಜದ ಹಿಂದುಳಿದ ಸಮುದಾಯಗಳಿಗೆ ಶಕ್ತಿಯಾಗಿ ಈ ಸಂಘವನ್ನು ಅವರು ಸ್ಥಾಪಿಸಿದ್ದಾರೆ. ಅವರ ದೂರದೃಷ್ಠಿ ಯೋಜನೆಯನ್ನು ಸಮಾಜ ಸೇ.ಸ.ಸಂಘ ಮುಂದುವರಿಸುತ್ತಿರುವುದು ಅಭಿನಂದನೀಯವಾಗಿದೆ ಎಂದ ಸಂಸದ ನಳಿನ್ ಕುಮಾರ್ ಹೆದ್ದಾರಿ ಬದಿ ಬಾಳಪ್ಪ ಹೆಸರಿನಲ್ಲಿ ತಂಗುದಾಣ ನಿರ್ಮಾಣ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಾಜ ಸೇ.ಸ.ಸಂಘದ ಅಧ್ಯಕ್ಷ ಸುರೇಶ ಕುಲಾಲ್ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ಆಶೀರ್ವವಚನ ನೀಡಿ ನಂಬಿಕೆ,ಶೃದ್ಧೆ,ದೃಢತೆ ನಮ್ಮ ಬದುಕಾಗಬೇಕು,ಪುಸ್ತಕದ ವಿದ್ಯೆಯ ಜೊತೆಗೆ ಮಕ್ಕಳಿಗೆ ಸಂಸ್ಕಾರದ ವಿದ್ಯೆಯನ್ನು ನೀಡುವ ಕಾರ್ಯ ಹೆತ್ತವರಿಂದಾಗಬೇಕು ಎಂದರು. ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಕಲ್ಲಡ್ಕ ರೈ.ಸೇ.ಸ.ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ,ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಹಾಗೂ ಸಂಘದ ನಿರ್ದೇಶಕರು ವೇದಿಕೆಯಲ್ಲಿದ್ದರು. ಉಡುಪಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ದುಗ್ಗಪ್ಪ ಕಡೆಕಾರ್ ಅವರು ಪ್ರಧಾನ ಭಾಷಣಗೈದರು.
ರಾಮ ಕುಲಾಲ್ ಗೆ ಬಾಳಪ್ಪ ಪ್ರಶಸ್ತಿ : ಸಹಕಾರಿ,ಸಾಮಾಜಿಕ ಸೇವೆಯಲ್ಲಿ ಸಾಧನೆಗೈದ ರಾಮಕುಲಾಲ್ ಪಕ್ಕಾಲು,ಪೆರ್ಡೂರು ಇವರಿಗೆ ಡಾ.ಅಮ್ಮೆಂಬಳ ಬಾಳಪ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಘದ ನಿರ್ದೇಶಕ ನಾಗೇಶ್ ಬಾಳೆಹಿತ್ಲು ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಆದೇರೀತಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ವಿದ್ಯಾರ್ಥಿ ವೇತನದ ವಿವರ ನೀಡಿದರು. ನಿರ್ದೇಶಕ ರಮೇಶ್ ಬಿ.ಸಾಲ್ಯಾನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ ಅವರು ಪ್ರಸ್ತಾವನೆಗೈದರು. ರಾಧಾಕೃಷ್ಣ ಕೆ. ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಅರುಣ್ ಕುಮಾರ್ ವಂದಿಸಿದರು. ಇದಕ್ಕು ಮುನ್ನ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.ಮಧ್ಯಾಹ್ನದ ಬಳಿಕ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಯಕ್ಷಗಾನ ಬಯಲಾಟ ನಡೆಯಿತು.
Be the first to comment on "ಬಂಟ್ವಾಳದಲ್ಲಿ ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ, ಡಾ. ಬಾಳಪ್ಪ ಜನ್ಮಶತಮಾನೋತ್ಸವ ಆಚರಣೆ"