www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127
ಬಂಟ್ವಾಳ: ತಾಲೂಕಿನ ತುಂಬೆ,ಕಳ್ಳಿಗೆ ಬಿ.ಮೂಡ ಮತ್ತು ನಡು ಈ ನಾಲ್ಕು ಗ್ರಾಮಗಳ ಮಾಗಣೆಯ ಅರಾಧ್ಯ ದೇವರಾದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಫೆ.15 ರಿಂದ 24 ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ತಾರನಾಥ ಕೊಟ್ಟಾರಿ ತಿಳಿಸಿದ್ದಾರೆ.
ದೇವಸ್ಥಾನದ ಅವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಫೆ.15 ರಿಂದ 20 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಬಳಿಕ 24 ರವರೆಗೆ ವಾರ್ಷಿಕ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಪ್ರತಿದಿನವು ವಿವಿಧ ವೈಧಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಫೆ.15 ರಂದು ಬಿ.ಸಿ.ರೋಡಿನಿಂದ ಕ್ಷೇತ್ರಕ್ಕೆ ಭವ್ಯವಾದ ಹಸಿರು ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ.ಬಳಿಕ ಗೋಪೂಜೆಯ ಮೂಲಕ ನೂತನ ಗೋಶಾಲೆಯ ಉದ್ಘಾಟನೆಗೊಳ್ಳಲಿದೆ ಹಾಗೆಯೇ ಈಗಾಗಲೇ ಆರಂಭವಾಗಿರುವ 48 ದಿನಗಳ ಸಂದ್ಯಾ ಭಜನಾ ಮಂಗಲೋತ್ಸವವು ನೆರವೇರಲಿದೆ ಎಂದು ವಿವರಿಸಿದರು. ಫೆ. 20 ರಂದು ಶ್ರೀಲಕ್ಷ್ಮೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮತ್ತು ಪರಿವಾರ ದೇವರಿಗೆ ಕಲಶಾಭಿಷೇಕ ಮಡೆಯಲಿದೆ.ಅಂದು ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಪ್ರಧಾನ ಭಾಷಣ ಮಾಡಲಿದ್ದು,ಮಾಜಿ ಸಚಿವ ರಮಾನಾಥ ರೈ,ಉದ್ಯಮಿ ಸೇಸಪ್ಪ ಕೋಟ್ಯಾನ್ ಮಾದಲಾದವರು ಭಾಗವಹಿಸಲಿದ್ದಾರೆ ಎಂದರು. ಮಡಕೆ ವಿನೋದ ಬೋಜ ಮೂಲ್ಯಅವರು ದೇವಸ್ಥಾನಕ್ಕೆ ಜಮೀನನ್ನು ಉಚಿತವಾಗಿ ದಾನರೂಪದಲ್ಲಿ ನೀಡಿದ್ದಾರೆ.ಕಳೆದ ಒಂದೂವರೆ ತಿಂಗಳಿನಿಂದ 5 ಸಾವಿರಕ್ಕೂ ಅಧಿಕ ಸ್ವಯಂಸೇವಕರು, 40ಕ್ಕೂ ಅಧಿಕ ಸಂಘಟನೆಗಳು, ಸಂಘಸಂಸ್ಥೆಗಳು ನಿರಂತರವಾಗಿ ದೇವಸ್ಥಾನದಲ್ಲಿ ಕರಸೇವೆಯನ್ನು ನಡೆಸಿದ್ದು, ಜೀರ್ಣೋದ್ಧಾರ ಕಾರ್ಯದ ಹೆಚ್ಚಿನ ಕೆಲಸಗಳು ಸೇವಾರೂಪದಲ್ಲೇ ನೆರವೇರಿರುವುದು ವಿಶೇಷವಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ ಹೇಳಿದರು.
ಶಾಸಕರಿಂದ 1 ಕೋ.ರೂ.ಅನುದಾನ: ದೇವಳದ ಜೀರ್ಣೋದ್ದಾರ ಕಾರ್ಯಗಳ ಆರಂಭದಲ್ಲಿ ಕ್ಷೇತ್ರಕ್ಕಾಗಮಿಸಿದ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಯವರಲ್ಲಿ ಹಲವಾರು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕರು ಒಂದು ತಿಂಗಳಲ್ಲಿ 1 ಕೋಟಿ ರೂ. ಅನುದಾನವನ್ನು ಒದಗಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಹಕರಿಸಿದ್ದಾರೆ ಎಂದು ದೇವಳದ ವ್ಯವಸ್ಥಾಪನ ಸಮಿತಿ ಪ್ರ.ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಈ ಸಂದರ್ಭದಲ್ಲಿ ವಿವರಿಸಿದರು.
ದೇವಸ್ಥಾನವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ಅಭಿವೃದ್ಧಿ, ದೇವಸ್ಥಾನದ ಎದುರುಭಾಗದಲ್ಲಿ ತಡೆಗೋಡೆ, ಒಂದು ಧಾರ್ಮಿಕ ದತ್ತಿ ಇಲಾಖೆಯಿಂದ ಬ್ರಹ್ಮಕಲಶೋತ್ಸವಕ್ಕೆ 10 ಲಕ್ಷ ರೂ.ಅನುದಾನ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೊಳವೆಬಾವಿ, ಅಲ್ಲದೆ ಗೋಶಾಲೆ, 5 ಗೃಹ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆಯನ್ನು ಗಮನಿಸಿದ ಶಾಸಕರು ಖಾಸಗಿ ಜಮೀನಿನ ಮಾಲಕರ ಜತೆ ಮಾತುಕತೆ ನಡೆಸಿ ಆ ಜಮೀನನ್ನು ಶಾಸಕರೇ ಖರೀದಿಸಿ ದೇವಸ್ಥಾನಕ್ಕೆ ಕೊಡುಗೆಯಾಗಿ ಹಸ್ತಾಂತರಿಸಿದ್ದಾರೆ ಎಂದರು. ಜೀರ್ಣೋದ್ದಾರ ಕಾರ್ಯದ ಅಂಗವಾಗಿ ದೇವಸ್ಥಾನದ ಮುಂಭಾಗ ತಡೆಗೋಡೆ ಆವರಣ ಗೋಡೆ ಅಲಂಕಾರ, ಗೋಶಾಲೆ, ಯಾಗಶಾಲೆ, ಉಗ್ರಾಣ ಕೊಠಡಿ, ಒಳಾಂಗಣ ಮತ್ತು ಗೋಪುರಕ್ಕೆ ಗ್ರಾನೈಟ್ ಅಳವಡಿಕೆ ,ಒಳಾಂಗಣಕ್ಕೆ ಮೇಲ್ಚಾವಣಿ, ಹೊರಾಂಗಣ ಚಪ್ಪರ ದುರಸ್ತಿ, ಅಶ್ವತ್ಥಕಟ್ಟೆ, ಇಂಟರ್‌ಲಾಕ್, ಕೈ,ಕಾಲು ತೊಳೆಯುವ ವ್ಯವಸ್ಥೆ ಸೇರಿ ಒಟ್ಟು 75 ಲಕ್ಷ ರೂ.ಅಧಿಕ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಂಗೋಲಿ ಸದಾನಂದ ಶೆಟ್ಟಿ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಳದ ಅರ್ಚಕರಾದ ರಾಮಕೃಷ್ಣ ಕಡಂಬಳಿತ್ತಾಯ,ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ಯಶೋಧ ಜಾರಂದಗುಡ್ಡೆ,ವಿವಿಧ ಸಮಿತಿ ಪದಾಧಿಕಾರಿಗಳಾದ ನವೀನ್ ಚಂದ್ರ ಶೆಟ್ಟಿ ಮುಂಡಾಜೆಗುತ್ತು,, ಗಣೇಶ್ ಸುವರ್ಣ ತುಂಬೆ, ಕವಿರಾಜ ಚಂದ್ರಿಗೆ, ಸೋಮಪ್ಪ ಸುವರ್ಣ ತುಂಬೆ,ಯೋಗೀಶ್ ಕುಮಾರ್ ದರಿಬಾಗಿಲು,ದೇವಿಪ್ರಸಾದ್ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಮೊದಲಾದವರಿದ್ದರು.
Be the first to comment on "ದೇವಂದಬೆಟ್ಟು ದೇವಸ್ಥಾನದಲ್ಲಿ ಫೆ.15ರಿಂದ 24ರವರೆಗೆ ಬ್ರಹ್ಮಕಲಶಾಭಿಷೇಕ, ವಾರ್ಷಿಕ ಜಾತ್ರಾ ಮಹೋತ್ಸವ"