www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ವಿಧಾನಸಭೆ ವಿರೋಧಪಕ್ಷದ ಉಪನಾಯಕರಾಗಿ ನಿಯುಕ್ತಿಗೊಂಡಿರುವ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಸೋಮವಾರ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭ ಮಾತನಾಡಿದ ಪೂಜಾರಿ, ದೇವಸ್ಥಾನ, ಮಸೀದಿ, ಚರ್ಚುಗಳಿಗೆ ತೆರಳಿ ಸರ್ವಧರ್ಮದ ದೇವರ ಅನುಗ್ರಹ ಪಡೆದುಕೊಂಡು, ಉತ್ತಮವಾಗಿ ಕೆಲಸ ಕಾರ್ಯಗಳನ್ನು ನಡೆಸುವಂತೆ ಯು.ಟಿ.ಖಾದರ್ ಅವರಿಗೆ ತಿಳಿಸಿದರು. ಭೇಟಿ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಇರಾ ಗ್ರಾಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ತನ್ನ ಕೆಲಸ ಕಾರ್ಯಗಳನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದ್ದು, ಹಿರಿಯರ ಆಶೀರ್ವಾದ ಪಡೆಯಲು ಪೂಜಾರಿಯವರ ಮನೆಗೆ ಬಂದಿದ್ದೇನೆ. ಹಿರಿಯ ಕಾಂಗ್ರೆಸ್ ನಾಯಕರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ ಎಂದರು. ಬಿ.ಕೆ.ಹರಿಪ್ರಸಾದ್ ಅವರು ವಿಧಾನಪರಿಷತ್ತಿನ ಪಕ್ಷದ ನಾಯಕರಾದದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಆಸ್ಕರ್ ಫೆರ್ನಾಂಡಿಸ್, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಸಹಿತ ಪ್ರಮುಖ ನಾಯಕರ ಆಶೀರ್ವಾದದಿಂದ ಮುನ್ನಡೆಯುತ್ತೇನೆ. ಎಲ್ಲ ಜಾತಿ ಧರ್ಮದವರೊಂದಿಗೆ ಬೆರೆತು ಕೆಲಸ ಮಾಡುವ ಕಾರಣ ತನಗೆ ಈ ಹುದ್ದೆ ದೊರಕಿದೆ ಎಂದು ಭಾವಿಸುತ್ತೇನೆ ಎಂದರು. ಸಿ.ಎಂ.ಇಬ್ರಾಹಿಂ ಅವರು ಪಕ್ಷ ತ್ಯಾಗದ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖಾದರ್, ಅವರು ಹಿರಿಯ ನಾಯಕರಾಗಿದ್ದು, ಪಕ್ಷದಲ್ಲೇ ಇರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
Be the first to comment on "ಜನಾರ್ದನ ಪೂಜಾರಿ ಭೇಟಿಯಾಗಿ ಆಶೀರ್ವಾದ ಪಡೆದ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್"