www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ: ಮಂಗಳೂರು ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಿಶ್ವ ಕೊಂಕಣಿ ಸರ್ದಾರ್ (ನಾಯಕ) ಎಂದೇ ಗುರುತಿಸಲ್ಪಟ್ಟಿದ್ದ ಬಂಟ್ವಾಳದ ಬಸ್ತಿ ವಾಮನ್ ಶೆಣೈ (88) ಭಾನುವಾರ ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಸ್ವಗೃಹದಲ್ಲಿ ಮಧ್ಯಾಹ್ನ ಸುಮಾರು 12.15ಕ್ಕೆ ನಿಧನ ಹೊಂದಿದರು. ಇಬ್ಬರು ಪುತ್ರರು (ಬಸ್ತಿ ಮಾಧವ ಶೆಣೈ, ಬಸ್ತಿ ದಿನೇಶ್ ಶೆಣೈ) ಮತ್ತು ಓರ್ವ ಪುತ್ರಿ (ವಿದ್ಯಾ ಕಿಣಿ) ಯನ್ನು ಅವರು ಅಗಲಿದ್ದಾರೆ.
ನಾಳೆ ಜನವರಿ 3 ರಂದು ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 9 ರಿಂದ 10ರವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಅವರ ಬಂಟ್ವಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೊಂಕಣಿ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಕೊಂಕಣಿ ಭಾಷಿಕರನ್ನು ವಿಶ್ವದಾದ್ಯಂತ ಒಗ್ಗೂಡಿಸುವಲ್ಲಿ ಮೂಂಚೂಣಿಯಲ್ಲಿದ್ದುಕೊಂಡು ಮಹತ್ವದ ಪಾತ್ರ ನಿರ್ವಹಿಸಿರುವ ಬಸ್ತಿ ವಾಮನ ಶೆಣೈ ಅವರಿಗೆ ವಿವಿಧ ಪ್ರಶಸ್ತಿ, ಸನ್ಮಾನ, ಗೌರವಗಳು ಸಂದಿವೆ. ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸುದೀರ್ಘ ಕಾಲ ರಾಜ್ಯಾದ್ಯಂತ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಅವರು ಕೊಂಕಣಿ ಸಾಂಸ್ಕೃತಿಕ, ಭಾಷಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್, ಇಂಟಕ್ ನಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಗುರುತಿಸಿಕೊಂಡಿದ್ದ ಅವರು, ಬಂಟ್ವಾಳದ ಎಸ್.ವಿ.ಎಸ್.ಸಂಸ್ಥೆಗಳ ಸಂಚಾಲಕರಾಗಿ, ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ, ರೋಟೇರಿಯನ್ ಆಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 1974ರ ಬಂಟ್ವಾಳ ಪ್ರವಾಹ ಸಂದರ್ಭ ಅವರು ಕೈಗೊಂಡ ಸೇವಾ ಕಾರ್ಯಗಳಿಗೆ ಪ್ರಶಸ್ತಿ ಲಭಿಸಿತ್ತು.
ಬಂಟ್ವಾಳದಲ್ಲಿ ಬಸ್ತಿ ಮಾಧವ ಶೆಣೈ ಮತ್ತು ಗೌರಿ ಅವರ ಪುತ್ರರಾಗಿ 1934ರ ನವೆಂಬರ್ 6ರಂದು ಜನಿಸಿದ್ದ ಶೆಣೈ ಅವರು, ಬಂಟ್ವಾಳ ಎಸ್.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿ ಕಲಿತು, ತಂದೆಯವರೊಂದಿಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಟ್ರೇಡ್ ಯೂನಿಯನ್ ವಿಭಾಗ ಇಂಟಕ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸರಸ್ವತಿ ಕಲಾ ಪ್ರಸಾರಕ ಸಂಘ ಮತ್ತು ಸರಸ್ವತಿ ಸಂಗೀತ ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರಾಗಿದ್ದರು. ಕೊಂಕಣಿ ರಂಗಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಶೆಣೈ, ರೋಟರಿ ಜಿಲ್ಲೆಯಲ್ಲಿ ವಿಶೇಷ ಪ್ರಶಸ್ತಿ ಪಡೆದಿದ್ದರು. ಟಿ.ಎ.ಪೈ.ಗಳು ಅವರ ನಾಯಕತ್ವ ಗುಣ ಮೆಚ್ಚಿ ಸಿಂಡಿಕೇಟ್ ಬ್ಯಾಂಕ್ ಗೆ ಸೇರಲು ತಿಳಿಸಿದ್ದರು. ವೃತ್ತಿಜೀವನದಿಂದ ನಿವೃತ್ತರಾದ ಬಳಿಕ ಸಂಪೂರ್ಣವಾಗಿ ಕೊಂಕಣಿ ಚಟುವಟಿಕೆಗಳಿಗೆ ಸಮಯ ಮೀಸಲಿಟ್ಟ ವಾಮನ ಶೆಣೈ, ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿದ್ದ ಪೌಲ್ ಮೊರಾಸ್ ಅವರೊಂದಿಗೆ ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಒತ್ತಾಯಿಸಲು ಜನರನ್ನು ಸಂಘಟಿಸುವ ಚಳವಳಿಯ ಕೊಂಕಣಿ ಜಾಥಾದ ಸಂಘಟನಾ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಿ ರಾಜ್ಯಾದ್ಯಂತ ಜಾಥಾ ಆಯೋಜಿಸಿದರು. 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲ ಅಧ್ಯಕ್ಷರಾಗಿದ್ದ ಅವರು, ವಿಶ್ವ ಕೊಂಕಣಿ ಸಮ್ಮೇಳನವನ್ನು ಆಯೋಜಿಸಿದ್ದರು. 1997ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತರಾದ ಅವರು ಎರಡು ಅವಧಿಯಲ್ಲಿ ಅದರ ಅಧ್ಯಕ್ಷರಾಗಿದ್ದರು. 2004ರಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷರಾಗಿ ಗುರುತಿಸಲ್ಪಟ್ಟಿದ್ದರು.
Be the first to comment on "ವಿಶ್ವ ಕೊಂಕಣಿ ಸರ್ದಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಸ್ತಿ ವಾಮನ ಶೆಣೈ ನಿಧನ"