www.bantwalnews.com Report ಬಂಟ್ವಾಳನ್ಯೂಸ್ ವರದಿ
ಬಿ.ಸಿ.ರೋಡಿನ ಅಲೆತ್ತೂರಿನ ‘ಕೆಸರ್ ಕಂಡ’ದಲ್ಲಿ ಅಲೆತ್ತೂರು ದಿ.ಗೋಪಾಲ ಪೂಜಾರಿ ಸ್ಮರಣಾರ್ಥ ಅವರ ಪುತ್ರ ಲೋಕೇಶ್ ಸುವರ್ಣ ಅಲೆತ್ತೂರು ಸಾರಥ್ಯದಲ್ಲಿ ಒಸರ್ ದ ಕಂಡೊಡು ಕೆಸರ್ ಡ್ ಗೊಬ್ಬುಗ ಎಂಬ ಕೆಸರುಗದ್ದೆ ಕ್ರೀಡಾಕೂಟಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಇಂದಿನ ಪೀಳಿಗೆ ಹಿಂದಿನ ತಲೆಮಾರಿನ ಜೀವನಪದ್ಧತಿಯನ್ನು ಅರಿತುಕೊಳ್ಳುವುದು ಅವಶ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಭೂಮಸೂದೆ ಕಾನೂನು ಜಾರಿಯಾದ ಬಳಿಕ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಳವಾಯಿತು. ಗದ್ದೆಯಲ್ಲಿ ಆಟವಾಡುತ್ತಾ, ಕೃಷಿಯ ಸಂಸ್ಕೃತಿಯ ಅರಿವು ಕೆಸರುಗದ್ದೆ ಕ್ರೀಡಾಕೂಟದ ಮೂಲಕ ಆಗುತ್ತದೆ ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಅವರು ದಿ.ಗೋಪಾಲ ಪೂಜಾರಿ ಅವರ ಭಾವಚಿತ್ರಕ್ಕೆ ದೀಪಪ್ರಜ್ವಲನಗೈದರು.
ಕಾರ್ಯಕ್ರಮದ ರೂವಾರಿ ಲೋಕೇಶ ಸುವರ್ಣ ಅಲೆತ್ತೂರು ಅಧ್ಯಕ್ಷತೆ ವಹಿಸಿ, ತನ್ನ ತಂದೆ ಅಲೆತ್ತೂರು ದಿ.ಗೋಪಾಲ ಪೂಜಾರಿ ಸ್ಮರಣಾರ್ಥ ಆಯೋಜಿಸಲಾಗಿರುವ ಈ ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ಕೃಷಿಯೊಂದಿಗೆ ಬೆರೆತು ಜೀವಿಸುವ ನಮ್ಮ ಬದುಕಿಗೆ ಇಂಥ ಕ್ರೀಡಾಕೂಟಗಳು ಪೂರಕವಾಗುತ್ತದೆ ಎಂದರು.
ಪುರಸಭಾ ಸದಸ್ಯೆ ಝೀನತ್ ಫಿರೋಜ್ ಮಾತನಾಡಿ, ಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳಲ್ಲೇ ಆಟವಾಡುವ ಮಕ್ಕಳನ್ನು ವಾರಕ್ಕೊಮ್ಮೆಯಾದರೂ ಪ್ರಾಕೃತಿಕವಾಗಿ ಹೊರಾಂಗಣದಲ್ಲಿ ಆಟವಾಡಲು ಕರೆದುಕೊಂಡು ಹೋಗಬೇಕು, ಜತೆಗೆ ಹಿರಿಯರೂ ಮಕ್ಕಳೊಂದಿಗೆ ಕಾಲ ಕಳೆಯಬೇಕು ಎಂದರು.
ಪತ್ರಕರ್ತ ಹರೀಶ ಮಾಂಬಾಡಿ, ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ನೇಮಿರಾಜ ಶೆಟ್ಟಿ, ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಬಿರ್ವ ಸೆಂಟರ್ ಮಾಲೀಕ ಸಂಜೀವ ಪೂಜಾರಿ, ಪ್ರಮುಖರಾದ ಜಗದೀಶ ಕೊಯ್ಲ, ಅಲೆತ್ತೂರು ಆನಂದ ಪೂಜಾರಿ, ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ನಮ್ರತಾ ಸುವರ್ಣ ಸ್ವಾಗತಿಸಿ, ವಂದಿಸಿದರು. ಹಿರಿಯ ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳಿಗೆ 3 ಕಾಲಿನ ಓಟ, ಉಪ್ಪಿನಮೂಟೆ, ಲಿಂಬೆ ಚಮಚ, ನೀರು ತುಂಬಿಸುವುದು ಇದ್ದರೆ, ಮಕ್ಕಳಿಗೆ ಮತ್ತು ಪುರುಷರಿಗೆ ಅಡಿಕೆ ಹಾಳೆ ಓಟ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸಂಗೀತ ಕುರ್ಚಿ, ಪುರುಷರು ಮತ್ತು ಮಹಿಳೆಯರಿಗೆ 100 ಮೀ.ಓಟದ ಸ್ಪರ್ಧೆ ಇರಲಿದೆ. ಪುರುಷರು ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ರಿಲೇ ಇದ್ದರೆ, ವಿಶೇಷ ಆಕರ್ಷಣೆಯಾಗಿ ನಿಧಿ ಶೋಧ, ಒಮ್ಮುಖ ಓಟ, ಜೋಡಿ ಕಂಬಳ ಕ್ರೀಡಾಕೂಟದಲ್ಲಿತ್ತು.
Be the first to comment on "ಅಲೆತ್ತೂರಿನ ಕೆಸರ್ ಕಂಡದಲ್ಲಿ ಒಸರ್ ದ ಕಂಡೊಡು ಕೆಸರ್ ಡ್ ಗೊಬ್ಬುಗ – ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟನೆ"