ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತಿ ವಿಶೇಷವಾದ ಲಿಂಗರೂಪಿ ಬಾಲಗಣಪತಿ ದೇವರ ಸಾನಿಧ್ಯವಿರುವ ಸಜಿಪಮೂಡ ಗ್ರಾಮದ ಅನ್ನಪ್ಪಾಡಿಯಲ್ಲಿರುವ ಶ್ರೀ ಬಾಲಗಣಪತಿ ದೇವಸ್ಥಾನದಲ್ಲಿ ನವೀಕರಣ ಪುನಃಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಡಿ.27ರಿಂದ 29ರವರೆಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆಗುತ್ತು ತಿಳಿಸಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಬಾಲಾಲಯದಲ್ಲಿ ಪೂಜೆಗೊಳ್ಳುತ್ತಿರುವ ಬಾಲಗಣಪತಿ ದೇವಸ್ಥಾನ ನವೀಕರಣಗೊಳಿಸಲು ಕಾರ್ಯೋನ್ಮುಖರಾಗಿ ದೇವಸ್ಥಾನ ನಿರ್ಮಾಣಗೊಂಡಿದ್ದು, ದೇವಸ್ಥಾನವು ಅವಿಭಜಿತ ದ.ಕ.ಜಿಲ್ಲೆಯಲ್ಲೇ ವಿಶೇಷವಾಗಿ ಶ್ರೀ ಬಾಲಗಣಪತಿಯ ಸ್ವತಂತ್ರ ಏಕದೇವ ದೇವಾಲಯವಾಗಿದೆ. ಪಶ್ಚಿಮಾಭಿಮುಖವಾಗಿ ಇರುವ ಈ ದೇವಸ್ಥಾನದಲ್ಲಿ ಲಿಂಗರೂಪಿ ವಿಗ್ರಹದಲ್ಲಿ ಶ್ರೀಬಾಲಗಣಪತಿಯ ಆರಾಧನೆಯಾಗುತ್ತದೆ. ಪ್ರಾತಃಕಾಲ ನಡೆಯುವ ಶ್ರೀಬಾಲಗಣಪತಿ ಹವನದಿಂದ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತವಾಗುತ್ತದೆ ಎಂದರು.
26ರಂದು ಹಸಿರುವಾಣಿ ಹೊರೆಕಾಣಿಕೆ, 27, 28 ಮತ್ತು 29ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಇರಲಿವೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸಜಿಪಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಗೌರವಾಧ್ಯಕ್ಷ ಕೆ.ಸದಾನಂದ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಪೂಜಾರಿ ಸಾರ್ತಾವು, ಜಯಪ್ರಕಾಶ್ ಪೆರ್ವ, ಜೊತೆ ಕಾರ್ಯದರ್ಶಿ ದೇವದಾಸ್ ಅನ್ನಪ್ಪಾಡಿ, ರಮೇಶ್ ಅನ್ನಪ್ಪಾಡಿ, ಕೋಶಾಧಿಕಾರಿ ಲಿಂಗಪ್ಪ ಎಸ್. ದೋಟ, ಪ್ರಮುಖರಾದ ವಿಶ್ವನಾಥ ಬೆಳ್ಚಡ, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಸಜಿಪಮೂಡದ ಅನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನದಲ್ಲಿ 27ರಿಂದ 29ರವರೆಗೆ ಬ್ರಹ್ಮಕಲಶೋತ್ಸವ, ಜಾತ್ರಾ ಮಹೋತ್ಸವ"