ಬಂಟ್ವಾಳ: ವಿಜಯ ಕರ್ನಾಟಕದ ರಾಜ್ಯಮಟ್ಟದ ಸೂಪರ್ ಸ್ಟಾರ್ ರೈತ ಪುರಸ್ಕಾರ ಪಡೆದ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ಕೃಷಿ ಕಾರ್ಮಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 2019 ರಲ್ಲಿ ಇಂಧನ ಚಾಲಿತ ದೇಶೀಯ ಟ್ರೀ ಬೈಕ್ ಆವಿಷ್ಕರಿಸಿದ್ದರು. ಸುಧಾರಿತ ವಿಧಾನದ ಈ ಬೈಕ್ ಕಡಿಮೆ ಅವಧಿಯಲ್ಲಿ ರೈತರ ಗಮನ ಸೆಳೆದಿರುವುದಲ್ಲದೇ ದೇಶ-ವಿದೇಶಗಳಲ್ಲೂ ಜನಪ್ರಿಯತೆ ಪಡೆದು ಬೇಡಿಕೆ ಸೃಷ್ಟಿಸಿತು. ದಿ ಹಿಸ್ಟರಿ ಚಾನೆಲ್ನಲ್ಲೂ ಪ್ರಕಟಗೊಂಡಿತ್ತು. ಇದೀಗ ಪ್ರತಿಷ್ಠಾ ಎಂಬ ಸಂಸ್ಥೆ ನೀಡುವ ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಗೌರವಕ್ಕೆ ಗಣಪತಿ ಭಟ್ ಪಾತ್ರರಾಗಿದ್ದಾರೆ.
ಅತಿವೇಗದಲ್ಲಿ ಮರವೇರುವ ಹಾಗೂ ಅಡಕೆ ಕೃಷಿಕರಿಗೆ ನೆರವಾಗುವ ಈ ಬೈಕ್ ಅನ್ನು ಗಣಪತಿ ಭಟ್ ಆವಿಷ್ಕರಿಸಿದ ವೇಳೆ ಮಹೀಂದ್ರಾ ಕಂಪನಿಯ ಮಾಲೀಕರೇ ಟ್ವಿಟ್ಟರ್ ನಲ್ಲಿ ಈ ಕಾರ್ಯವನ್ನು ಶ್ಲಾಘಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ವಿಜಯ ಕರ್ನಾಟಕ ಪತ್ರಿಕೆಯ ಸೂಪರ್ ಸ್ಟಾರ್ ರೈತ ಎಂದು ರಾಜ್ಯಮಟ್ಟದಲ್ಲಿ ಕಳೆದ ವರ್ಷ ಗಣಪತಿ ಭಟ್ ಅವರನ್ನು ಗೌರವಿಸಿತ್ತು. ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಪ್ರಗತಿಪರ ರೈತರಾಗಿರುವ ಗಣಪತಿ ಭಟ್, ವಿವಿಧೆಡೆ ಈ ಯಂತ್ರದ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದು, ಆಸಕ್ತ ರೈತರಿಗೆ ಪ್ರಾತ್ಯಕ್ಷಿಕೆಯನ್ನೂ ನೀಡುತ್ತಾರೆ. ಟ್ರೀ ಬೈಕ್ ಗೆ ಉತ್ತಮ ಸ್ಪಂದನೆಯೂ ದೊರಕಿದ್ದು, ಬಹುಬೇಡಿಕೆಯೂ ಇದೆ ಎಂದು ಗಣಪತಿ ಭಟ್ ಹೇಳಿದ್ದಾರೆ. ಭಟ್ ಪುತ್ರಿ ಸುಪ್ರಿಯಾ ಅಡಕೆ ಮರವೇರುವ ದೃಶ್ಯಾಗಳಿಗಳು 2019ರಲ್ಲಿ ವೈರಲ್ ಆಗಿದ್ದವು. ಇತ್ತೀಚೆಗೆ ಐಪಿಎಲ್ ಗೆ ಶುಭ ಕೋರುವ ಜಾಹೀರಾತಿನಲ್ಲೂ ಭಟ್ ಪಾಲ್ಗೊಂಡು ಗಮನ ಸೆಳೆದಿದ್ದರು.
Be the first to comment on "ಟ್ರೀ ಬೈಕ್ ಆವಿಷ್ಕರಿಸಿದ ಸಜಿಪಮೂಡದ ಗಣಪತಿ ಭಟ್ ಅವರಿಗೆ ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಗೌರವ"