ಬಂಟ್ವಾಳ: ಈಗಾಗಲೇ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ವಿವಿಧ ಬೇಡಿಕೆಗಳ ಮನವಿಯನ್ನು ಡಿಸಿ ಕಚೇರಿಗೆ ನೀಡಲಾಗಿದೆ. ಈ ಬೇಡಿಕೆಗಳು ಈಡೇರದೇ ಇದ್ದಲ್ಲಿ ಮುಂದಿನ ಮಾರ್ಚ್ ವೇಳೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಒತ್ತಾಯಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆ ವತಿಯಿಂದ ದ.ಕ.ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುವ ಬೇಡಿಕೆಗಳಿಗೆ ನ್ಯಾಯ ಒದಗಿಸಿ, ಸರ್ಕಾರದ ವ್ಯಾಪ್ತಿಗೆ ಬರುವ ನಮ್ಮ ಬೇಡಿಕೆಗಳಿಗೆ ಸರ್ಕಾರಕ್ಕೆ ವರದಿ ನೀಡುವಂತೆ ಕೋರಿಕೊಂಡಿದ್ದೇವೆ. ಫೆ.2022ರ ಅಂತ್ಯದೊಳಗೆ ನಮ್ಮ ಬೇಡಿಕೆಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.ಇದಲ್ಲದೆ ಮೆಸ್ಕಾಂ ಬಂಟ್ವಾಳ ಉಪವಿಭಾಗಕ್ಕೆ ಸಂಬಂಧಿಸಿ ಗುತ್ತಿಗೆ ಮಾಪಕ ಓದುಗರಾಗಿ ಕೆಲಸ ಮಾಡುತ್ತಿದ್ದ 21 ನೌಕರರನ್ನು ಕೊರೊನಾ ಸಮಯದಲ್ಲಿ ಕೈಬಿಡಲಾಗಿದ್ದು, ಇವರನ್ನು ಮರುನೇಮಿಸುವಂತೆ ಒತ್ತಾಯಿಸಿದರು. ಬೇಡಿಕೆಗಳು ಸಕಾಲದಲ್ಲಿ ಈಡೇರದೇ ಇದ್ದರೆ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು, ಉಪಾಧ್ಯಕ್ಷ ಜಗದೀಶ ಮಂಗಳೂರು, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ನಾಗೇಶ್ ಮುಡಿಪು, ತಾಲೂಕು ಗೌರವಾಧ್ಯಕ್ಷ ರಮೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.
Be the first to comment on "ಬೇಡಿಕೆ ಈಡೇರದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ: ಸೇಸಪ್ಪ ಬೆದ್ರಕಾಡು ಎಚ್ಚರಿಕೆ"