- ಅರವಿಂದ ಚೊಕ್ಕಾಡಿ
ಪುನೀತ್ ರಾಜ್ಕುಮಾರ್ ನನ್ನ ಪರಿಚಿತರಲ್ಲ. ಸ್ನೇಹಿತರೂ ಅಲ್ಲ. ಜೀವನದಲ್ಲಿ ಒಮ್ಮೆಯೂ ಭೇಟಿ ಆಗಿಲ್ಲ. ಆದರೆ ನನ್ನನ್ನು ಕಾಡಿದ ಮರಣಗಳಲ್ಲಿ ಇದೂ ಒಂದು.
ಪುನೀತ್ ಜನಿಸಿದ್ದು 1975 ರಲ್ಲಿ. ನಾನು ಜನಿಸಿದ್ದೂ 1975 ರಲ್ಲಿ. 1985 ರ ಕಾಲಕ್ಕೆ ನಾನು, ಅಪ್ಪ, ಅಮ್ಮ ಕೊಡಗಿನ ಶ್ರೀಮಂಗಲದ ಸಮೀಪ ಬೀರುಗದಲ್ಲಿದ್ದ ಕಾಲ. 1985 ರ ಜೀವನ ಈಗ ನನಗೂ ಅನುಭವಕ್ಕೆ ಸುಲಭವಾಗಿ ತಂದುಕೊಳ್ಳಲು ಕಷ್ಟ. 5 ಪೈಸೆಗೆ 5 ಮಿಠಾಯಿಗಳನ್ನು ಖರೀದಿಸಿ ತಿನ್ನಬಹುದಿತ್ತು. ಒಂದೂ ವರೆ ರುಪಾಯಿಗೆ ಒಂದು ಕೆ.ಜಿ. ಸಿಗುತ್ತ ಇತ್ತು. ಸಂಬಂಧಿಗಳಿಗೆ ಸಂಪರ್ಕಕ್ಕಿದ್ದ ಏಕೈಕ ಮಾಧ್ಯಮ ಅಂಚೆ ಪತ್ರಗಳು. ಫೋನ್ ನಮ್ಮ ಕಲ್ಪನೆಯಲ್ಲೆ ಇಲ್ಲದ ಕಾಲ. ಕೂಲಿಗೆ 5 ರುಪಾಯಿ ದಿನ ಸಂಬಳದ ಕಾಲ. ಸಂಬಳಕ್ಕೆ ಹಣ ಇಲ್ಲದಿದ್ದರೆ ಮುಂದಿನ ಬೇಸಾಯದಲ್ಲಿ ಒಂದು ಮುಡಿ ಬತ್ತ ನಿಮಗೆ ಎನ್ನುತ್ತಿದ್ದುದನ್ನು ಕಂಡಿದ್ದೆ.
ಅಪ್ಪ ಹಲವು ಅಂತರಗಳಲ್ಲಿರುವ ನಾಲ್ಕು ದೇವಸ್ಥಾನಗಳ ಅರ್ಚಕರು. ಅಪ್ಪನಿಗೆ ಅನಾರೋಗ್ಯವಾದ್ದರಿಂದ 7-11 ವರ್ಷಗಳ ನಡುವಿನ ಹುಡುಗ ನಾನು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಎಲ್ಲ ನಾಲ್ಕೂ ದೇವಸ್ಥಾನಗಳ ಪೂಜೆ ಮಾಡಿ ಬಂದು ಶಾಲೆಗೆ ಹೋಗಬೇಕಿತ್ತು. ಅಲ್ಲೊಂದು ಗಂಧರ್ವ ಭೈರವ ಗುಡಿ ಇದೆ. ಬ್ರಹ್ಮಗಿರಿ ಬೆಟ್ಟದ ಕಾಡಿನಲ್ಲೆ ಒಂದರ್ಧ ಕಿಲೋ ಮೀಟರ್ ಹತ್ತಿಕೊಂಡು ಹೋಗಬೇಕು. ಆ ಕಾಲಕ್ಕೆ ಅದು ಹುಲಿ ಇದ್ದ ಕಾಡು. ಸಾಮಾನ್ಯವಾಗಿ ನನಗೆ ಭಯ ಇಲ್ಲ. ಆದರೆ ಅದೊಂದು ದಿನ ಪೂಜೆ ಮುಗಿಸಿ ಇಳಿದು ಬರುವಾಗ ಯಾವುದೊ ಪ್ರಾಣಿ ಪಕ್ಕದಲ್ಲೆ ಕೂಗಿದ ಸದ್ದಿಗೆ ಹೆದರಿ ಓಡಿದ್ದರಲ್ಲಿ ಕೆಳಗೆ ಗದ್ದೆಯ ತನಕ ಓಡಿ ಬಂದವನು ಗದ್ದೆ ಸಮೀಪ ಎಡವಿ ಬಿದ್ದ ರಭಸಕ್ಕೆ ಎಡ ಮೊಣಕಾಲಿನ ಒಳಗೆ ಒಂದು ಚೂಪಾದ ಕಲ್ಲು ನಾಟಿ ಒಳಗೆ ಹೋಗಿತ್ತು. ಆ ಕಲ್ಲು ಹೋದ ಜಾಗದ ಕಪ್ಪನೆಯ ಗುರುತು ಈಗಲೂ ಎಡ ಮೊಣ ಕಾಲಿನಲ್ಲಿದೆ.
1985 ರಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ ‘ ಬೆಟ್ಟದ ಹೂವು‘ ಸಿನಿಮಾ ಬಿಡುಗಡೆಯಾಗಿತ್ತು. ‘ನಾಂದಿ‘ ಯಂತಹ ಅಮೋಘ ಸಿನಿಮಾಗಳನ್ನು ನಿರ್ದೇಶಿಸಿದ ಎನ್. ಲಕ್ಷ್ಮೀನಾರಾಯಣ ಸಿನಿಮಾದ ನಿರ್ದೇಶಕರು. “ತಾಯೆ ಶಾರದೆ ಲೋಕ ಪೂಜಿತೆ ಜ್ಞಾನ ದಾತೆ ನಮೋಸ್ತುತೇ” ಎಂದು ಪಿ. ಬಿ.ಶ್ರೀನಿವಾಸ್ ಹಾಡಿದ ಅದ್ಭುತ ಹಾಡು ಅದರಲ್ಲಿದೆ. ಒಬ್ಬ ಬಡ ಹುಡುಗ ಅನಾರೋಗ್ಯ ಪೀಡಿತ ಅಪ್ಪ ಅಮ್ಮನನ್ನು ಸಾಕಲು ವಿಶೇಷ ಅಧ್ಯಯನಕ್ಕಾಗಿ ಬರುವ ಶರ್ಲಿ ಎಂಬ ಸಂಶೋಧಕಿಗೆ ಬೇಕಾದ ಬೆಟ್ಟದ ಹೂವನ್ನು ತಂದುಕೊಟ್ಟರೆ ಸಂಶೋಧಕಿ ಹುಡುಗನಿಗೆ ಎರಡು ರೂಪಾಯಿಯೊ ಐದು ರೂಪಾಯಿಯೊ ಕೊಡುತ್ತಿದ್ದರು. ಆ ಹಣವನ್ನು ಹುಡುಗ ಅಮ್ಮನಿಗೆ ಕೊಡುತ್ತಾನೆ. ಅದರಲ್ಲಿ ಹತ್ತು ಪೈಸೆ ಅಮ್ಮ ಮಗನಿಗೆ ಕೊಡುತ್ತಾಳೆ. ಹಾಗೆ ಬಂದ ಹಣವನ್ನೆಲ್ಲ ಒಟ್ಟು ಮಾಡಿ ಅಂಗಡಿಯಲ್ಲಿರುವ ‘ರಾಮಾಯಣ‘ ಪುಸ್ತಕವನ್ನು ಕೊಂಡು ಓದಬೇಕೆಂಬ ಆಸೆ ಹುಡುಗನಿಗೆ. ಬೆಟ್ಟದ ಹೂವನ್ನು ತರಲು ಹೋಗಿ ಹುಲಿ ಗರ್ಜನೆಗೆ ಹೆದರುವ ಹುಡುಗನ ಮುಖ ಭಾವ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕೊನೆಗೂ ರಾಮಾಯಣಕ್ಕಾಗಿ ಕೂಡಿಸಿಟ್ಟ ಹಣವನ್ನೆಲ್ಲ ಚಳಿಯಲ್ಲಿ ನಡುಗುವ ತಂದೆಗಾಗಿ ಕಂಬಳಿ ಕೊಂಡುಕೊಳ್ಳಲು ಬಳಸಿ ಅಂಗಡಿಯಲ್ಲಿರುವ ರಾಮಾಯಣ ಪುಸ್ತಕವನ್ನು ಆಸೆಯಿಂದ ನೋಡುತ್ತಾ ಹುಡುಗ ಹೋಗುವಲ್ಲಿಗೆ ಕಥೆ ಮುಗಿಯಿತು.
ಕಷ್ಟಗಳ ಒಳಗೆಯೇ ಓದಿನ ಆಸೆಯ ಹುಡುಗನಾಗಿ ಪುನೀತ್ ರಾಜ್ಕುಮಾರ್ ನನ್ನ ಭಾವ ಭಿತ್ತಿಯನ್ನು ಕಲಾವಿದರಾಗಿ ಪ್ರವೇಶಿಸಿ ನಿಂತವರು. ಕಥೆ, ನಿರ್ದೇಶನ ಯಾವುದೂ ಪುನೀತ್ ಅವರದಲ್ಲ. ಆದರೆ ಸನ್ನಿವೇಶವನ್ನು ಅನುಭವಿಸಿ ಅಭಿವ್ಯಕ್ತಿಪಡಿಸಬೇಕಲ್ಲ. ಹತ್ತು ವರ್ಷ ವಯಸ್ಸಿನ ಪುನೀತ್ ಅದನ್ನು ಎಷ್ಟು ಸಮರ್ಥವಾಗಿ ನಿರ್ವಹಿಸಿದ್ದರೆಂದರೆ ನಾನಿರುವ ತನಕ ಆ ಅಭಿನಯ ನನ್ನ ಮನಃಪಟಲದಿಂದ ಕದಲಲಾರದು.
“ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ ನೋಡು ಎಂತ ಚಂದ ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ” ‘ ಭಾಗ್ಯವಂತ’ ಸಿನಿಮಾಕ್ಕಾಗಿ ಪೂರ್ಣಚಂದ್ರ ಹಾಡಿರುವ ಈ ಗೀತೆಗೆ ಕೆ. ಎಸ್. ಅಶ್ವತ್ಥ್-ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದರು. ಅದರಲ್ಲೂ ಪುನೀತ್ ಅವರದು ಕಾಡುವ ಅಭಿನಯವೇ. ಎಲ್ಲರಿಂದಲೂ ತಿರಸ್ಕೃತನಾದ, ಬಾಲ್ಯದಲ್ಲೆ ತಂದೆ ತಾಯಿಯನ್ನು ಕಳೆದುಕೊಂಡ ನತದೃಷ್ಟನೆನಿಸಿಕೊಂಡ ಬಾಲಕ ಅಪಘಾತವಾಗಲಿದ್ದ ಇಡೀ ರೈಲು ಅಪಘಾತಕ್ಕೊಳಗಾಗದಂತೆ ತಡೆದು ‘ ಭಾಗ್ಯವಂತ’ ಬಾಲಕನಾದ ಕಥೆ ಇದು. ‘ಎರಡು ನಕ್ಷತ್ರಗಳು’ ನಲ್ಲಿ “ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು” ಗೀತೆ ಪುನೀತ್ ಅವರೇ ಹಾಡಿದ್ದು. ಮರೆಯಲು ಸಾಧ್ಯವಿಲ್ಲ. “ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು” ಕೂಡ ಪುನೀತ್ ಹಾಡಿದ್ದು.
ಒಬ್ಬ ಕಲಾವಿದ ಹಲವರ ಬದುಕಿನೊಂದಿಗೆ ಸಂವಾದಿಸಿ ಆತ್ಮಬಲವನ್ನು ಒದಗಿಸಬಲ್ಲ. ನನಗೆ ಅಂತಹ ಆತ್ಮಬಲವನ್ನು ಒದಗಿಸಿದ ಕಲಾವಿದರಲ್ಲಿ ಪುನೀತ್ ಒಬ್ಬರು. ಆ ರೂಪದಲ್ಲಿ ಪುನೀತ್ ಇಂದಿಗೂ ನನ್ನನ್ನು ಆವರಿಸಿಕೊಂಡಿದ್ದಾರೆ. ವ್ಯಕ್ತಿಯಾಗಿ ನನಗವರು ಅಪರಿಚಿತರು. ಅವರ ದಾನ, ಸಂಸ್ಕಾರ, ವಿನಯಗಳ ಬಗ್ಗೆ ಕೇಳಿದ್ದೇನೆ. ಗೊತ್ತಿಲ್ಲ. ಬಹುಶಃ ಅದು ರಾಜ್‌ಕುಮಾರ್ ಕುಟುಂಬದ ಸಹಜ ನಡೆವಳಿಕೆ. ಆ ಕ್ರೆಡಿಟ್ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೇ ಸಲ್ಲಬೇಕು. ಏನೇ ಆದರೂ, ಎಷ್ಟು ಅಮೂಲ್ಯವೇ ಆದರೂ,” ಒನ್ಸ್ ಲಾಸ್ಟ್, ಲಾಸ್ಟ್ ಪಾರ್ ಎವರೇ” ಅಲ್ವಾ. ಬೇರಾವ ಚಿಂತನೆಗೂ ಅಲ್ಲಿ ಅವಕಾಶವೇ ಇರುವುದಿಲ್ಲ. ಪುನೀತ್ ಅವರಿಗೆ ಶ್ರದ್ಧಾಂಜಲಿ…. (ಈ ಲೇಖನ ಅರವಿಂದ ಚೊಕ್ಕಾಡಿ ಅವರ ಫೇಸ್ ಬುಕ್ ನಲ್ಲಿ ಪ್ರಕಟವಾಗಿದ್ದು, ಅವರ ಅನುಮತಿಯೊಂದಿಗೆ ಪ್ರಕಟಿಸಲಾಗಿದೆ. ಅದರ ಲಿಂಕ್ ಇಲ್ಲಿದೆ.. https://www.facebook.com/aravindachokkadi )
Be the first to comment on "ಆವರಿಸಿದ ಕಲಾವಿದ – ಪುನೀತ್ ರಾಜ್ ಕುಮಾರ್"