ಬಂಟ್ಚಾಳ: ಸಂಸ್ಕಾರ ಭಾರತಿ ಬಂಟ್ವಾಳ ವತಿಯಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ ಭಾನುವಾರ ನಡೆಯಿತು.ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ದಿಕ್ಸೂಚಿ ಭಾಷಣ ಮಾಡಿದರು.
ಗುರುವಿನ ಕಲ್ಪನೆಯನ್ನು ನೀಡಿದ್ದು ಶಂಕರಾಚಾರ್ಯರು ಎಂದ ಅವರು, ಕೇವಲ ವಿದ್ಯೆ ಇದ್ದರೆ ಸಾಲದು, ಸಂಸ್ಕಾರ ಇರಬೇಕು ರಾಮನ ಪೂಜೆಯೆಂದರೆ ರಾಮನ ಆದರ್ಶಗಳ ಪಾಲನೆ. ಹಾಗೆಯೇ ವೇದವ್ಯಾಸರು ಹೇಳಿದ್ದನ್ನು ಅನುಸರಿಸಿದರೆ ಅದುವೇ ಗುರುವಂದನೆ. ಒಗ್ಗೂಡಿ ಬದುಕಲು ನೀಡುವ ಸಂದೇಶವನ್ನು ಗುರುತಿಸಬೇಕು. ಈಗಿನ ಶಿಕ್ಷಣ ಪಡೆದ ವಿದ್ಯಾವಂತರ ನಡವಳಿಕೆಗಳು ಹೃದಯವಂತಿಕೆಯನ್ನು ಹೊಂದಿದಂತಿರುವುದಿಲ್ಲ. ಸಂಸ್ಕಾರ ಭಾರತಿ ನಿಜವಾದ ಹೃದಯವಂತರನ್ನು ರೂಪಿಸುತ್ತಿದೆ. ವೇದವೇ ಹಿಂದುಧರ್ಮದ ಮೂಲಗ್ರಂಥ ಎಂದು ಸೂರ್ಯನಾರಾಯಣ ಭಟ್ ಹೇಳಿದರು.
ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಕೆ. ಶೆಟ್ಟಿ ಶುಭ ಹಾರೈಸಿದರು. ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕಿನ ಅಧ್ಯಕ್ಷ ಮತ್ತು ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಶೀನಶೆಟ್ಟಿ ಬಾರಿಂಜೆ,ನಾಟಿ ವೈದ್ಯರಾದ ಶೀನ ಪೂಜಾರಿ ಬಡಗಬೆಳ್ಳೂರು,ರಂಗಭೂಮಿಯ ಹಿರಿಯ ಕಲಾವಿದ ಪ್ರೇಮಾನಂದ ಭಟ್ ವಿಟ್ಲ, ಗ್ರಾಮೀಣಪ್ರಸೂತಿ ತಜ್ಞೆ ಗೌರಿ ಸಾಲೆತ್ತೂರು ಅವರನ್ನು ಅಭಿನಂದಿಸಲಾಯಿತು. ಡಾ.ವಾರಿಜ ನಿರ್ಬೈಲ್ ಮತ್ತು ಜಯಾನಂದ ಪೆರಾಜೆ ಗಮಕವಾಚನ ಹಾಗೂ ಚಿನ್ಮಯಿ ಶೆಟ್ಟಿ,ಸಂಜನ ಮೊಡಂಕಾಪು ತಂಡದಿಂದ ನೃತ್ಯ ಕಾರ್ಯಕ್ರಮ ಜರಗಿತು. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಸಹಸಂಚಾಲಕ ಜನಾರ್ದನ ಅಮ್ಮುಂಜೆ ಮತ್ತು ವಿಜಯ ಶೆಟ್ಟಿ ಸಾಲೆತ್ತೂರು, ಸಂಕಪ್ಪ ಶೆಟ್ಟಿ, ವಿಜಯಕೃಷ್ಣ ಐತಾಳ್ ಸನ್ಮಾನಪತ್ರ ವಾಚಿಸಿದರು. ಮಂಜು ವಿಟ್ಲ ವಂದಿಸಿದರು.
Be the first to comment on "ಸಂಸ್ಕಾರ ಭಾರತಿ ಬಂಟ್ವಾಳ ವತಿಯಿಂದ ಬಿ.ಸಿ.ರೋಡಿನಲ್ಲಿ ಗುರುವಂದನೆ"