ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಳಭಾಗದಲ್ಲೀಗ ಜನಪದ ಶೈಕ್ಷಣಿಕ ಚಟುವಟಿಕೆಗಳನ್ನು ಸಾರುವ ವರ್ಣ ಚಿತ್ತಾರ. ಇದು ಚಿತ್ರಕಲಾ ಶಿಕ್ಷಕರ ಸಂಘದ ಸದಸ್ಯರಾಗಿರುವ ತಾಲೂಕಿನ ವಿವಿಧ ಹೈಸ್ಕೂಲುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುವ ಸದಸ್ಯರ ಕೊಡುಗೆ.
ತಾಯಿ ಮಗುವನ್ನು ಎತ್ತಿಕೊಂಡು ಜೋಗುಳ ಹಾಡುವ ಮೂಲಕ ತಾಯಿಯೇ ಮೊದಲ ಗುರು ಎಂಬ ಅರಿವು ಮೂಡಿಸುವ ಚಿತ್ರದ ಸಹಿತ, ಮಗು ಬೆಳೆಯುತ್ತಾ ಹೋದಂತೆ ಪರಿಸರದಲ್ಲಿ ದೊರಕುವ ಶಿಕ್ಷಣ, ಪ್ರಕೃತಿಯ ಬೆರಗು, ಶಿಕ್ಷಣದ ಪರಿಕಲ್ಪನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಬಿಂಬಿಸುವ ಸಂಕೇತಗಳನ್ನು ಬಣ್ಣಗಳ ಮೂಲಕ ಗೋಡೆಗಳಲ್ಲಿ ಬಿಂಬಿಸಿದ್ದಾರೆ. ವರ್ಲಿ ಚಿತ್ತಾರದ ರಂಗನ್ನು ತುಂಬಿದ್ದಾರೆ. ಮಧುಬನಿ ಶೈಲಿಯ 6 ಚಿತ್ರಗಳ ಸಹಿತ ಹಲವು ಚಿತ್ರಗಳು ಇಲ್ಲಿವೆ. ಈಗಾಗಲೇ ಬಿಇಒ ಕಚೇರಿಯ ಹೊರಾಂಗಣ, ಮಾಳಿಗೆಗಳಲ್ಲಿ ಚಿತ್ರಕಲಾ ಶಿಕ್ಷಕರು ಚಿತ್ರಗಳ ಮೂಲಕ ಅರಿವು ಮೂಡಿಸಿದ್ದಾರೆ.
ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಾಮದಪದವಿನ ಮುರಳೀಕೃಷ್ಣ ರಾವ್, ಸದಸ್ಯರಾದ ಸಜಿಪಮೂಡದ ಬಾಲಕೃಷ್ಣ ಶೆಟ್ಟಿ, ಪೆರ್ನೆಯ ಚೆನ್ನಕೇಶವ ಡಿ.ಆರ್, ಮಂಚಿಯ ತಾರಾನಾಥ ಕೈರಂಗಳ, ಕೊಯಿಲದ ಧನಂಜಯ್, ಬೊಳಂತಿಮೊಗರಿನ ಉಮೇಶ್ ಎಸ್.ಜಿ., ಸಿದ್ಧಕಟ್ಟೆಯ ಅಮೀನಾ ಶೇಖ್ ಮುಂತಾದ ಚಿತ್ರಕಲಾ ಶಿಕ್ಷಕರು 14 ದಿನಗಳ ಕಾಲ ಭಿತ್ತಿ ಚಿತ್ತಾರ ಎಂಬ ಕಲ್ಪನೆಯಡಿ ಇದನ್ನು ರಚಿಸಿದ್ದಾರೆ.
ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮಲ್ಲೇಸ್ವಾಮಿ ಅವರ ನಿರ್ದೇಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್ ಎಂ.ಪಿ.ಅವರ ಸಂಪೂರ್ಣ ಸಹಕಾರದೊಂದಿಗೆ ಚಿತ್ರಗಳನ್ನು ರಚಿಸಲಾಗಿದೆ. ಕಚೇರಿಗೆ ಬರುವವರು ಇದನ್ನು ಪ್ರೇರಣೆಯಾಗಿ ತೆಗೆದುಕೊಂಡು ಶಾಲೆಗಳಲ್ಲಿ ಮಾಡಬಹುದು. ಈಗಾಗಲೇ ಕಚೇರಿಯಲ್ಲಿ ಚಿತ್ರಗಳು ಎರಡು ಹಂತದಲ್ಲಿ ಆಗಿವೆ. ಇದು ಮೂರನೇ ಹಂತ. ಎನ್ನುತ್ತಾರೆ ಚಿತ್ರಕಲಾ ಶಿಕ್ಷಕರ ಸಂಘ, ಬಂಟ್ವಾಳ ತಾಲೂಕು ಅಧ್ಯಕ್ಷರಾದ ಮುರಳೀಕೃಷ್ಣ ರಾವ್.
Be the first to comment on "ಜನಪದ, ಶೈಕ್ಷಣಿಕ ಚಟುವಟಿಕೆಗಳ ರೂಪಕವಾದ ಬಂಟ್ವಾಳ ಬಿಇಒ ಕಚೇರಿಯ ವರ್ಣಚಿತ್ತಾರ"