ಸಿದ್ಧಕಟ್ಟೆ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋವಿಡ್ ಸಂದರ್ಭ ಒತ್ತಡ ನಿರ್ವಹಣೆ ಎಂಬ ಕುರಿತು ವೆಬಿನಾರ್ ನಡೆಯಿತು.ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ರಿ) ಬೆಂಗಳೂರು ಹಾಗೂ ಯುವ ಸ್ಪಂದನ ಕೇಂದ್ರ ಮಂಗಳೂರು ಇವುಗಳ ಆಶ್ರಯದಲ್ಲಿಕಾರ್ಯಕ್ರಮ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯುವ ಪರಿವರ್ತಕರು ಹಾಗೂ ಜೀವನ ಕೌಶಲ್ಯ ತರಬೇತುದಾರ ಶ್ರೀಕಾಂತ್ ಪೂಜಾರಿ ಬಿರಾವು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಯ ಕೌಶಲ್ಯಗಳನ್ನು ತಿಳಿಹೇಳಿದರು.
ಕೋವಿಡ್ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದ್ದು, ನಮ್ಮೆಲ್ಲರ ಸಾಮಾನ್ಯ ಬದುಕನ್ನು ಕಸಿದುಕೊಂಡಿದೆ. ಹೊಸ ಸವಾಲುಗಳನ್ನು ಎಸೆದಿದೆ. ಒತ್ತಡವು ಖಿನ್ನತೆ, ಒಂಟಿತನ, ಕೀಳರಿಮೆ, ಮಾನಸಿಕ ಅಶಾಂತಿ, ಹೊಟ್ಟೆಬಾಕತನ, ಅತಿಯಾದ ಕೋಪ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸಿ ವಿದ್ಯಾರ್ಥಿ ಜೀವನ ಹಾಳುಮಾಡುತ್ತದೆ. ಹಾಗಾಗಿ ಒತ್ತಡವನ್ನು ಯೋಗ, ಧ್ಯಾನ, ಸಣ್ಣಪುಟ್ಟ ದೈಹಿಕ ಅಭ್ಯಾಸಗಳು, ಹವ್ಯಾಸಗಳು, ಪ್ರಕೃತಿಯೊಂದಿಗೆ ನೇರ ಒಡನಾಟ ಮುಂತಾದವುಗಳ ಮೂಲಕ ಕಡಿಮೆಮಾಡಬಹುದೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಸೌಮ್ಯ ಹೆಚ್ ಕೆ ಮಾತನಾಡಿ, ಒಂದು ಕೊರೊನಾ ಹೊಸ ಬದಲಾವಣೆ ಹಾಗೂ ಸವಾಲು ಕೂಡ. ಇದರಿಂದ ಸೃಷ್ಟಿಯಾಗಿರುವ ಸಾಮಾಜಿಕ ,ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಒತ್ತಡಗಳನ್ನು ಪರಸ್ಪರ ಪ್ರೀತಿ, ಆಶಾವಾದ, ಧನಾತ್ಮಕ ಆಲೋಚನೆಗಳು ಹಾಗೂ ಸನ್ನದ್ಧತೆ ಮೂಲಕ ಎದುರಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಗ್ರಂಥಪಾಲಕ ಡಾ. ಶ್ರೀನಿವಾಸ್ ಸ್ವಾಗತಿಸಿದರು. ಆಂತರಿಕಗುಣಮಟ್ಟ ಭರವಸೆ ಕೋಶದ ಸಂಚಾಲಕ ವಿನಯ್ ಎಂ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Be the first to comment on "ಕೊರೊನಾ ಸಂದರ್ಭ ಒತ್ತಡ ನಿರ್ವಹಣೆ: ಸಿದ್ಧಕಟ್ಟೆ ಸರ್ಕಾರಿ ಪ್ರ.ದರ್ಜೆ ಕಾಲೇಜಿನಲ್ಲಿ ವೆಬಿನಾರ್"