ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ಏಳು ವರ್ಷಗಳಾದ ಹಿನ್ನೆಲೆ
ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ 7ನೇ ವರ್ಷಾಚರಣೆಯ ಸಂಭ್ರಮವಾಗಿ ಅನಂತಾಡಿ, ನೆಟ್ಲಮುಡ್ನೂರು, ಮಾಣಿ ಹಾಗೂ ಪೆರಾಜೆ ಗ್ರಾಮದ ಬಿಜೆಪಿ ಪಕ್ಷದ ವತಿಯಿಂದ ಅನಂತಾಡಿ ಗ್ರಾಮದ ಗೋಳಿಕಟ್ಟೆ ಜಂಕ್ಷನ್ ನಲ್ಲಿ ನಡೆದ ಸೇವಾಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭಾನುವಾರ ಚಾಲನೆ ನೀಡಿದರು.
ಜಗತ್ತು ಕಂಡ ಪ್ರಭಾವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ 7ನೇ ವರ್ಷದ ಸಂಭ್ರಮವನ್ನು ಸೇವಾ ಕಾರ್ಯದ ಮೂಲಕ ಆಚರಣೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಸೂಚನೆಯಂತೆ ಬಿಜೆಪಿ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಒಪ್ಪಿಗೆ ಪಡೆದ ಲಸಿಕೆಯ ಕುರಿತು ಸಾಕಷ್ಟು ಅಪಪ್ರಚಾರ ಮಾಡಿದವರಿಗೆ ಲಸಿಕೆ ಅನಿವಾರ್ಯತೆ ಏನು ಎಂಬುದನ್ನು ಪ್ರಧಾನಿಗಳು ತೋರಿಸಿಕೊಟ್ಟಿದ್ದಾರೆ. ಪಿಪಿಇ ಕಿಟ್, ಮಾಸ್ಕ್ ಗಳನ್ನು ತಯಾರು ಮಾಡಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಬಂಟ್ವಾಳದಲ್ಲಿಯೂ ಕೊರೊನಾ ಎದುರಿಸಲು ಎಲ್ಲಾ ಸಿದ್ಧತೆ ಯಶಸ್ವಿಯಾಗಿ ನಡೆದಿದ್ದು, ಕೊರೊನಾಕ್ಕೆ ಮೀಸಲಿಟ್ಟ ೧೫೫ ಬೆಡ್ ಗಳ ಪೈಕಿ ೨೬ ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಬೆಡ್ ಗಳು ಕೂಡ ಬಂಟ್ವಾಳದಲ್ಲಿ ಖಾಲಿ ಇದೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಿತ್ತಿರುವುದು ನಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಿರೋಧಿಗಳು ಏನೇ ಹೇಳಿದರೂ, ನಮ್ಮ ಕೆಲಸಗಳು ನಿರಂತರವಾಗಿ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರಿಗೆ ಅಕ್ಕಿ ವಿತರಣೆ, ಚಾಲಕರಿಗೆ ಸಹಾಯಧನದ ಸೇವಾಸಿಂಧು ನೋಂದಣಿಗೆ ಚಾಲನೆ, ಸಸಿ ವಿತರಣೆ- ನೆಡುವಿಕೆ, ಕೊರೊನಾ ಜಾಗೃತಿ ಪ್ರಚಾರ ಮೊದಲಾದ ಏಳು ಬಗೆಯ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನೆಟ್ಲ ಮುಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್, ಅನಂತಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾಣಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರೊನಾಲ್ಡ್ ಡಿಸೋಜ, ಪ್ರಧಾನಕಾರ್ಯದರ್ಶಿ ಸನತ್ ಕುಮಾರ್, ನೇರಳಕಟ್ಟೆ ವ್ಯವಸಾಯ ಸಹಕಾರಿ ಕೇಂದ್ರದ ಅಧ್ಯಕ್ಷ ಪುಷ್ಪರಾಜ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಮಾಜಿ ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ಪ್ರಮುಖರಾದ ಗಣೇಶ್ ರೈ ಮಾಣಿ, ಯಶವಂತ ನಾಯ್ಕ್ ನಗ್ರಿ, ನಾರಾಯಣ ಶೆಟ್ಟಿ ಮಾಣಿ, ಶಕೀಲ್ ನೆಟ್ಲ ಮುಡ್ನೂರು,ಅಶೋಕ್ ರೈ, ಧನಂಜಯ್, ಜಯಂತಿ, ಹರೀಶ್ ಉಪಸ್ಥಿತರಿದ್ದರು. ದಿನೇಶ್ ಅನಂತಾಡಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಬಂಟ್ವಾಳ ತಾಲೂಕಿನಲ್ಲಿ ಸೇವಾ ಕಾರ್ಯಕ್ಕೆ ಅನಂತಾಡಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಚಾಲನೆ"