ಬೂತ್ ಮಟ್ಟದಲ್ಲಿ ಸೇವಾ ಚಟುವಟಿಕೆ – ಸುದ್ದಿಗೋಷ್ಠಿಯಲ್ಲಿ ದೇವಪ್ಪ ಪೂಜಾರಿ
ಬಂಟ್ವಾಳ: ಕೊರೊನಾ ಸೋಂಕಿನಿಂದ ತಂದೆ, ತಾಯಿಯರಲ್ಲಿ ಯಾರಾದರೂ ಮೃತಪಟ್ಟು, ಮಕ್ಕಳನ್ನು ನೋಡಲು ಯಾರೂ ಇಲ್ಲದೇ ಇದ್ದರೆ, ಅಂಥ ಮಕ್ಕಳ ವಿದ್ಯಾಭ್ಯಾಸ, ಪೋಷಣೆಯ ಜವಾಬ್ದಾರಿಯನ್ನು ಬಂಟ್ವಾಳ ಬಿಜೆಪಿ ವಹಿಸಲಿದ್ದು, ಇದಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಕ್ಷೇಮನಿಧಿ ಸ್ಥಾಪಿಸಲಾಗಿದೆ. ಭಾನುವಾರ ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಹೇಳಿದ್ದಾರೆ. ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಈಗಾಗಲೇ ಶಾಸಕರು ವೈಯಕ್ತಿಕ ನೆಲೆಯಲ್ಲಿ 10 ಲಕ್ಷ ರೂ ಕೊಟ್ಟಿದ್ದಾರೆ, ಜೊತೆಗೆ ದಾನಿಗಳ ಸಹಕಾರದೊಂದಿಗೆ ಆತಂಕದಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಕ್ಷೇಮನಿಧಿ ಮೂಲಕ ನೆರವಾಗುವ ಇರಾದೆಯನ್ನು ಬಿಜೆಪಿ ಬಂಟ್ವಾಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಕಾರ್ಯಪ್ರವೃತ್ತವಾಗಿದೆ ಎಂದರು. ನರೇಂದ್ರ ಮೋದಿ ಪ್ರಧಾನಿಯಾಗಿ ಏಳು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ 28, 29 ಮತ್ತು 30ರಂದು ಬಿಜೆಪಿ ವತಿಯಿಂದ ಕ್ಷೇತ್ರದ ಎಲ್ಲ 59 ಗ್ರಾಮಗಳ ಬೂತ್ ಗಳಲ್ಲಿ ಸೇವಾಚಟುವಟಿಕೆ ನಡೆಸಲಾಗುತ್ತದೆ. ಮೇ.30 ರಂದು 59 ಗ್ರಾಮದ ಬೂತ್ ಗಳಲ್ಲಿ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ. ಕ್ಷೇತ್ರದ ಏಳು ಮಹಾಶಕ್ತಿಕೇಂದ್ರಗಳ ಪ್ರಮುಖರು ಇದರ ಕುರಿತು ನಿಗಾ ವಹಿಸಲಿದ್ದು, ಕೊರೊನಾ ಸಂಕಷ್ಟಕ್ಕೆ ತೊಂದರೆಗೊಳಗಾದವರಿಗೆ ನೆರವು ಸಹಿತ 22 ಸೇವಾಚಟುವಟಿಕೆ ನಡೆಸಲಾಗುತ್ತದೆ. ಶಾಸಕರು ಸಹಿತ ಎಲ್ಲ ಜನಪ್ರತಿನಿಧಿಗಳು ಅವರವರ ಬೂತ್ ಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಪಕ್ಷ ಪ್ರಮುಖರ ಸಭೆಯನ್ನು ಈ ವಿಷಯದ ಕುರಿತು ಮಾಡಲಾಗಿದೆ ಎಂದರು. ಇದು ಒಂದು ದಿನದ ಕಾರ್ಯಕ್ರಮ ಅಲ್ಲ, ನಿರಂತರವಾಗಿ ಇದು ನಡೆಯಲಿದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅನಂತಾಡಿ, ನೆಟ್ಲಮೂಡ್ನೂರು ಗ್ರಾಮದಲ್ಲಿ ನಡೆಯುವ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಎಂದರು. ಪಕ್ಷ ಪ್ರಮುಖರಾದ ಮೋನಪ್ಪ ದೇವಸ್ಯ, ರವೀಶ್ ಶೆಟ್ಟಿ, ಸುದರ್ಶನ ಬಜ, ಡೊಂಬಯ ಅರಳ, ಪ್ರದೀಪ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಬಿಜೆಪಿಯಿಂದ ಕ್ಷೇಮನಿಧಿ, ಸೇವಾ ಚಟುವಟಿಕೆಗಳಿಗೆ ನಾಳೆ ಚಾಲನೆ"