ಸಾಂಸ್ಕೃತಿಕ, ಸರ್ಕಾರಿ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಜಾಗವಿದು
ಬಂಟ್ವಾಳ: ದಶಕಗಳ ಕಾಲ (ನಿರ್ಮಾಣ: 1983) ಬಂಟ್ವಾಳದ ಜನರ ಸಾಂಸ್ಕೃತಿ, ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ಬಿ.ಸಿ.ರೋಡಿನ ಹಳೇ ರಂಗಮಂದಿರ ಕಟ್ಟಡ ಧರಾಶಾಹಿಯಾಗಲು ಕ್ಷಣಗಣನೆ ಆರಂಭಗೊಂಡಿದೆ. ಬಿ.ಸಿ.ರೋಡ್ ನಲ್ಲಿ ನಡೆಯುತ್ತಿರುವ 2 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಈ ಕಾರ್ಯ ನಡೆಯುತ್ತಿದ್ದು, ಉಪಯೋಗಶೂನ್ಯವಾಗಿ ಶಿಥಿಲಗೊಂಡಿರುವ ಈ ಕಟ್ಟಡವನ್ನು ಧರೆಗುರುಳಿಸುವ ಅಂತಿಮ ವಿಧಿ ವಿಧಾನಗಳನ್ನು ಮಾಡಲಾಗುತ್ತಿದೆ. 1983ರಲ್ಲಿ ಈ ಸಾರ್ವಜನಿಕ ರಂಗಮಂದಿರವನ್ನು ನಿರ್ಮಿಸಲಾಗಿತ್ತು. ಅಂದಿನ ತಹಸೀಲ್ದಾರ್ ಆರ್.ಕೆ.ರಾಜು ಅವರ ಮುತುವರ್ಜಿಯಿಂದ ರಂಗಮಂದಿರವನ್ನು ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಿಸಲಾಗಿತ್ತು. ಅಂದಿನಿಂದ ಅಂದರೆ 1983ರಿಂದ 2017ರವರೆಗೆ ಇಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿದ್ದವು.
ದಶಕಗಳ ಕಾಲ ಬಿ.ಸಿ.ರೋಡಿನಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕರಾವಳಿ ಉತ್ಸವ, ರಸಮಂಜರಿ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ರಾಜಕೀಯ ಭಾಷಣ, ಪ್ರತಿಭಟನಾ ಸಭೆ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವಕ್ಕೂ ಈ ರಂಗಮಂದಿರ ವೇದಿಕೆಯಾಗಿತ್ತು. ಮಿನಿ ವಿಧಾನಸೌಧ ನಿರ್ಮಾಣಗೊಂಡ ಸಂದರ್ಭವೇ ಇದನ್ನು ತೆಗೆಯಲಾಗುವ ಪ್ರಸ್ತಾಪ ಇದ್ದರೂ ಆಗಿರಲಿಲ್ಲ. ಬಳಿಕ ಶಿಥಿಲವಾಗಿ, ನಿರ್ವಹಣೆ ಇಲ್ಲದ ಈ ಕಟ್ಟಡದಲ್ಲಿ ಮಿನಿ ವಿಧಾನಸೌಧ ನಿರ್ಮಾಣಗೊಂಡ ನಂತರವೂ ಜನಸ್ನೇಹಿ ಕೇಂದ್ರದ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಅದು ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆದ ಮೇಲೆ ಇಲ್ಲಿ ಚಟುವಟಿಕೆ ಸ್ತಬ್ದಗೊಂಡಿತು. ಆದರೆ ಇಲ್ಲಿ ನಿರ್ವಹಣೆ ಇಲ್ಲದ ಕಾರಣ ಬಾಟಲಿ, ತ್ಯಾಜ್ಯ ವಸ್ತುಗಳನ್ನು ಎಸೆಯುವ ಜಾಗವಾಗಿ ಮಾರ್ಪಟ್ಟಿತು. ಇದೀಗ ರಸ್ತೆ ಅಭಿವೃದ್ಧಿಯ ಕೆಲಸದ ಹೊತ್ತಿನಲ್ಲಿ ಬಿ.ಸಿ.ರೋಡಿನ ಮರಣಶಯ್ಯೆಯಲ್ಲಿದ್ದ ಹಳೆಯ ಕಟ್ಟಡವೊಂದಕ್ಕೆ ಮೋಕ್ಷ ನೀಡುವ ಕಾರ್ಯವಾಗುತ್ತಿದೆ.
Be the first to comment on "ಬಿ.ಸಿ.ರೋಡಿನ ಹಳೇ ರಂಗಮಂದಿರ ಕಟ್ಟಡಕ್ಕೆ ಕೊನೆಗೂ ‘ಮೋಕ್ಷ’"