ಇಡೀ ಭಾರತದಲ್ಲಿ ಕರ್ನಾಟಕ ಎಲ್ಲ ರಾಜ್ಯಗಳಂತಲ್ಲ. ಇಲ್ಲಿ ಹುಚ್ಚು ಭಾಷಾಭಿಮಾನವಿಲ್ಲ. ಅಂಧ ಆರಾಧನೆಗಳು ವಿರಳ. ಇತರ ರಾಜ್ಯಗಳಿಗೆ ಹೋಲಿಸಿದರೆ, ಎಲ್ಲರನ್ನೂ ಎಲ್ಲವನ್ನೂ ಸ್ವೀಕರಿಸಿದ ರಾಜ್ಯ ಕರ್ನಾಟಕವಾದರೆ, ಕರಾವಳಿ ಭಾಗ ಮತ್ತಷ್ಟು ಉದಾರಿ. ಮಂಗಳೂರಿನಲ್ಲಿ ಕನ್ನಡ ಮಾತನಾಡುವುದರ ಜೊತೆಗೆ ತುಳು, ಕೊಂಕಣಿ ಭಾಷೆಗೂ ಸಮಾನ ಸ್ಥಾನಮಾನವಿದೆ.
ಬೆಂಗಳೂರಿನಿಂದ ಪ್ರಸಾರವಾಗುವ ರಾಜ್ಯಮಟ್ಟದ ಪತ್ರಿಕೆಗಳು ಕರಾವಳಿಯಲ್ಲಿ ಜನರನ್ನು ತಲುಪಬೇಕಿದ್ದರೆ ಇಲ್ಲಿಯ ಸೊಗಡಿನ ಭಾಷೆಯಲ್ಲಿಯೇ ತಲುಪಬೇಕು. ಹಾಗೆಯೇ ಆಕಾಶವಾಣಿ.
ದಕ್ಷಿಣ ಕನ್ನಡದ ಘಟ್ಟ ಪ್ರದೇಶಗಳ, ಮೈದಾನಗಳ ಮತ್ತು ಕರಾವಳಿಯ ಆವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಮಂಗಳೂರಿನಲ್ಲಿ ಆಕಾಶವಾಣಿ ಕೇಂದ್ರ ಸ್ಥಾಪನೆಯಾಯಿತು. “ಬಹುಜನ ಹಿತಾಯ, ಬಹುಜನ ಸುಖಾಯ” ಇದು ಆಕಾಶವಾಣಿಯ ಲಾಂಛನದಲ್ಲಿರುವ ಧ್ಯೇಯ ವಾಕ್ಯ. ಬಹುಶ: ಇಷ್ಟು ವರ್ಷಗಳಲ್ಲಿ ಆಕಾಶವಾಣಿಯು ತನ್ನ ಧ್ಯೇಯಕ್ಕೆ ಬದ್ಧವಾಗಿಯೇ ನಡೆದುಕೊಂಡು ಬಂದಿದೆ. ಪರಿಸರದ ಜನರ ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮುಂಜಾನೆ ಪ್ರಸಾರವಾಗುವ “ಚಿಂತನ”, ಮಕ್ಕಳಿಗಾಗಿ “ಬಾಲವೃಂದ”, ಯುವಕರಿಗಾಗಿ “ಯುವವಾಣಿ”, ಮಹಿಳೆಯರಿಗಾಗಿ “ವನಿತಾವಾಣಿ” ರೈತರಿಗಾಗಿ ಪ್ರಸಾರವಾಗುವ “ಕಿಸಾನ್ ವಾಣಿ”, ಯಕ್ಷಗಾನ ತಾಳಮದ್ದಲೆ, ಭಕ್ತಿಗೀತೆಗಳು, ನಾಟಕಗಳು, ರೂಪಕಗಳು, ಐತಿಹಾಸಿಕ-ಸಾಮಾಜಿಕ ಚಿತ್ರಣಗಳು, ಸಾಧಕರ ಜೊತೆಗಿನ ಸಂವಾದ, ಚರ್ಚೆ, ಸಂದರ್ಶನ, ಆರೋಗ್ಯ ಕಾರ್ಯಕ್ರಮಗಳು, ಕೇಳುಗರ ಜೊತೆಗೆ ನೇರ ಸಂವಹನ ನಡೆಸುವ ಕಾರ್ಯಕ್ರಮಗಳು, ಹಿರಿಯ ಸಾಹಿತಿಗಳು, ವೈದ್ಯರು, ಶಿಕ್ಷಕರು ಮತ್ತು ವಿವಿಧ ವಿಷಯಗಳಲ್ಲಿ ಪರಿಣತರಾದವರ ಜೊತೆಗೆ ನಡೆಸುವ ಸಂದರ್ಶನಗಳು, ಚಿತ್ರಗೀತೆಗಳು, ಗಝಲ್ ಗಳು, ಭಾವಗೀತೆಗಳು, ಜನಪದ ಸಂಗೀತ – ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಆಕಾಶವಾಣಿಯು, ಈ ಸಮಾಜದ ಬಹುತೇಕ ವ್ಯಕ್ತಿಗಳ ಮಾನಸಿಕ-ಬೌದ್ಧಿಕ ವಿಕಸನಕ್ಕೆ ಕಾಣಿಕೆ ನೀಡಿದೆ.
“ತುಳು” ಈ ನೆಲದ ಭಾಷೆ, ಇಲ್ಲಿನ ಸಂಸ್ಕೃತಿ, ಆಚರಣೆ, ಜೀವನಪದ್ಧತಿ, ಕೃಷಿ-ಪರಂಪರೆಯ ಮೂಲ ನೆಲೆ ತುಳು-ಭಾಷೆ. ತುಳು ಭಾಷೆಗೆ ತನ್ನದೇ “ಅಸ್ಮಿತೆ” ಇದೆ. ಈ ಭಾಷೆಯಲ್ಲಿ ವಿಶಿಷ್ಟ ಜನಪದ ಸಾಹಿತ್ಯದ ಭಂಡಾರ ಇದೆ, ಪಾಡ್ದನಗಳು,ಸಂಧಿಗಳು, ಬೀರಗಳು,ನಾಣ್ಣುಡಿ, ಕಬಿತೆ, ಉರಲ್, ಯಕ್ಷಗಾನ, ಕೋಲ-ನೇಮ-ತಂಬಿಲ-ಕಂಬುಲ, ನಾಗ-ದೈವ-ಆಚರಣೆಗಳು-ನಂಬಿಕೆಗಳು ಈ ತುಳು-ನೆಲದ ಅನನ್ಯತೆಗೆ ಸಾಕ್ಷಿ. “ತುಳು” ವಿನ ಈ ಎಲ್ಲಾ ಅಂತ:ಪ್ರಜ್ಞೆಗಳಿಗೆ ಹೊರ ಜಗತ್ತಿನ ಬೆಳಕಿಂಡಿಯಾಗಿ ಮೂಡಿ ಬಂದಿದ್ದು, ನಮ್ಮ ಈ ನೆಲದ ಜನರ “ಮನದ ಮಾತುಗಳಿಗೆ” ಮೊದಲು ಧ್ವನಿಯಾದದ್ದು ನಮ್ಮ “ಮಂಗಳೂರು ಆಕಾಶವಾಣಿ”.
ವೆಚ್ಚ ಕಡಿತ, ಸಿಬ್ಬಂದಿ ಕಡಿತ, ರಾಜ್ಯಾದ್ಯಂತ ಏಕರೂಪದ ಸೇವೆ – ಹೀಗೆ ನಾನಾ ಕಾರಣಗಳ ಹೆಸರಿನಲ್ಲಿ ಆಕಾಶವಾಣಿ ಸ್ಥಳೀಯ ಕಾರ್ಯಕ್ರಮಗಳನ್ನು ಕಡಿತ ಮಾಡಲು ಮುಂದಾಗುವ ಪ್ರಸ್ತಾಪಗಳು ಬಂದಾಗ ತುಳುವಿನ ಕುರಿತೇ ಮೊದಲ ಆತಂಕ ಮೂಡಿತು.
ಮಂಗಳೂರು ಆಕಾಶವಾಣಿಯಲ್ಲಿ ತುಳುವಿನ ಸಾಹಿತ್ಯ- ಸಂಸ್ಕೃತಿ-ಭಾಷೆ-ಆಚರಣೆಗೆ ವೈಶ್ಶಿಷ್ಟ್ಯಗಳಿಗೆ ಸಂಬಂಧಿಸಿದ ಸಾವಿರಾರು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ, ಈ ನೆಲೆಯಲ್ಲಿ ಮಕ್ಕಳಿಗಾಗಿ ಪ್ರಸಾರವಾಗುವ “ಗುಬ್ಬಿದಗೂಡು”, ಯುವಕರಿಗಾಗಿ “ಜವನೆರೆ ಕಲ”, ಮಹಿಳೆಯರಿಗಾಗಿ “ಪೂ-ಪನ್ನೀರ್”, ತುಳು ಮಾತುಕತೆ, “ಕೆಂಚನ ಕುರ್ಲರಿ”, “ಗಾಂಪಣ್ಣನ ತಿರ್ಗಾಟ”, ತುಳುವಿನ ಹೊಸ ಪುಸ್ತಕ, ಹೊಸ-ಸಿನೆಮಾ ಬಿಡುಗಡೆಯ ಕಾರ್ಯಕ್ರಮ “ಸ್ವರ ಮಂಟಮೆ”, ತುಳು ನಾಟಕ, ತುಳು ಯಕ್ಷಗಾನ, ಹರಿಕಥೆ, “ತುಳು ಸುದ್ದಿ-ಸಾರಾಂಶ”, ತುಳು ಪಾಡ್ದನ-ಸಂಧಿ-ಕಬಿತ, ತುಳು ನಾಡಿನ ಭೂತಾರಾಧನೆಗೆ, ವೀರರಿಗೆ ಸಂಬಂಧಿಸಿದ ನೂರಾರು ಪಾಡ್ದನಗಳನ್ನು, “ಮಂದಾರ ರಾಮಾಯಣವನ್ನು”, “ತುಳು ಹರೀಶ್ಚಂದ್ರ ಕಾವ್ಯ” ವನ್ನು ಹಾಗೂ ಇನ್ನೂ ಅನೇಕ ಸುದ್ದಿ-ಸಂಗತಿಗಳನ್ನು ಯಾವ ಮಾಧ್ಯಮಗಳೂ ಮುನ್ನೆಲೆಯಲ್ಲಿ ಇಲ್ಲದ ಕಾಲಘಟ್ಟದಲ್ಲಿ, ನಮ್ಮ ಹಳ್ಳಿಗಳಿಗೆ, ನಮ್ಮ ರೈತರಿಗೆ, ನಮ್ಮ ಕೇಳುಗರಿಗೆ ತಲುಪಿಸಿದ್ದು, ಆ ಮೂಲಕ ಅಳಿದು ಹೋಗಬಹುದಾಗಿದ್ದ, ಒಂದು ನೆಲದ ಸಂಸ್ಕೃತಿ-ಆಚರಣೆ-ಪರಂಪರೆಯ ಬೇರುಗಳನ್ನು ನಶಿಸದಂತೆ ಜತನಗೊಳಿಸಿದ್ದು, ಅದನ್ನು ಪೋಷಿಸಿದ್ದು “ಮಂಗಳೂರು ಆಕಾಶವಾಣಿ” ಈ ಮಾತುಗಳಿಗೆ “ಮಂಗಳೂರು ಆಕಾಶವಾಣಿಯ” ಧ್ವನಿ ಭಂಡಾರದಲ್ಲಿ ಇರುವ ತುಳು-ಭಾಷೆಗೆ ಸಂಬಂಧಿಸಿದ ಟೇಪ್ ಗಳು, ರೆಕಾರ್ಡ್ ಗಳು, ಧ್ವನಿಮುದ್ರಿಕೆಗಳು ಸಾಕ್ಷಿ ನುಡಿಯುತ್ತವೆ.
ಆರಂಭದಲ್ಲಿ “ಕ್ರಷಿರಂಗ” ಅನ್ನುವ ಹೆಸರಿನಲ್ಲಿ ಇದೀಗ “ಕಿಸಾನ್ ವಾಣಿ” ಅನ್ನುವ ಹೆಸರಿನಲ್ಲಿ ಆಕಾಶವಾಣಿ ರೈತರಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಕಿಸಾನ್ ವಾಣಿಯ ಕಾರ್ಯಕ್ರಮಗಳನ್ನು ಕಾದು ಕುಳಿತು ಆಲಿಸುವ, ಆಕಾಶವಾಣಿ ಹೇಳುವ ಸಲಹೆ, ಸೂಚನೆ, ಮಾಹಿತಿ, ಹವಾಮಾನ ವರದಿಗಳನ್ನು, ಬೆಳೆ-ಬೆಲೆಯ ಸೂಚನೆಗಳನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಳ್ಳುವ ನೂರಾರು ರೈತರು ಈಗಲೂ ಇದ್ದಾರೆ.
ವಿದ್ಯಾರ್ಥಿಗಳಲ್ಲಿ ಭಾಷಾ ಶುದ್ಧತೆ ಮತ್ತು ಬೆಳವಣಿಗೆಗೆ ಪೂರಕ ಪ್ರೋತ್ಸಾಹ-ಮಾರ್ಗದರ್ಶನ ನೀಡಿ ಆ ಮೂಲಕ ಅವರನ್ನು ಭವಿಷ್ಯದ ಉತ್ತಮ ಸಾಹಿತಿಗಳು-ಕವಿಗಳನ್ನಾಗಿ ರೂಪಿಸಿದ ಹಿರಿಮೆ ಆಕಾಶವಾಣಿಯದ್ದು. ಬರಹಗಾರರು ತಮ್ಮ ಕಥೆ, ಕವನ, ನಾಟಕ, ರೂಪಕ, ಭಾಷಣ – ಬರಹಗಳನ್ನು ಹೊರಜಗತ್ತಿಗೆ ಪರಿಚಯಿಸಲು ಆಕಾಶವಾಣಿ ಪ್ರೋತ್ಸಾಹ-ಪ್ರೇರಣೆ ನೀಡಿದೆ. ನಮ್ಮ ಅನೇಕ ತುಳು-ಕೊಂಕಣಿ ಬರಹಗಾರರ ಸಾಹಿತ್ಯಗಳಿಗೆ ಆಕಾಶವಾಣಿ ನಿರಂತರ ಬೆಂಬಲ ನೀಡುತ್ತಾ ಬಂದಿದೆ. ಈ ಭಾಗದ ಅನೇಕ ಸಾಹಿತಿಗಳನ್ನು, ಸಂಗೀತಗಾರರನ್ನು ಬೆಳಕಿಗೆ ತಂದ ಮತ್ತು ಅವರನ್ನು ಬೆಳೆಸಿದ ಕೀರ್ತಿ ಆಕಾಶವಾಣಿಯದ್ದು, ಈ ನಿಟ್ಟಿನಲ್ಲಿ, ನಮ್ಮ ಅನೇಕ ಹಿರಿಯ ಸಾಹಿತಿಗಳನ್ನು, ಸಂಗೀತಗಾರರನ್ನು, ಯಕ್ಷಗಾನ-ನಾಟಕ ಕಲಾವಿದರನ್ನು, ಹೆಸರಿಸಬಹುದು.
ಯಕ್ಷಗಾನಕ್ಕೆ ವಿಶೇಷ ಮಾನ್ಯತೆ-ಅವಕಾಶ ನೀಡಿರುವುದು, ಈ ಕಲೆಗೆ ಸಂಬಂಧಿಸಿದಂತೆ ಅನೇಕ ವಿಶಿಷ್ಟ ಹಾಗೂ ವೈವಿದ್ಯಮಯ ಕಾರ್ಯಕ್ರಮಗಳನ್ನು ನೀಡಿರುವುದು, ಪ್ರಯೋಗಗಳಿಗೆ ವೇದಿಕೆಯಾಗಿರುವುದು ಮಂಗಳೂರು ಆಕಾಶವಾಣಿಯ ಹಿರಿಮೆ. ಈ ನಿಟ್ಟಿನಲ್ಲಿ ಇದೀಗ ಪ್ರಸಾರವಾಗುತ್ತಿರುವ “ಯಕ್ಷಾಂತರಂಗ” ಕಾರ್ಯಕ್ರಮವನ್ನು ಹೆಸರಿಸಬಹುದು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕುಂದಾಪುರ ಗ್ರಾಮೀಣ ಭಾಗದ ಯಕ್ಷಗಾನ ಪ್ರಿಯರಿಗೆ, ಸಾಹಿತ್ಯಾಸಕ್ತರಿಗೆ “ಮಂಗಳೂರು ಆಕಾಶವಾಣಿ” ಆತ್ಮೀಯ ಒಡನಾಡಿ ಮಾತ್ರವಲ್ಲ, ಸತ್ವಯುತ ಹಾಗೂ ಸತ್ಯ ಮಾಹಿತಿಯನ್ನು ನೀಡುವ ಹರಿಕಾರ.
ನಮ್ಮ ನೆಲದ ಸತ್ವವನ್ನು ಕಾಪಾಡಿ, ಅದರ ಸೊಬಗು-ಸಮೃದ್ಧಿಯನ್ನು ಜಗತ್ತಿಗೆ ಪರಿಚಯಿಸಿ, ನಮ್ಮ ಅನೇಕ ಕಲಾವಿದರು, ಸಾಹಿತಿಗಳು, ಬರಹಗಾರರನ್ನು ಬೆಳೆಸಿ, ನಮ್ಮ ಪರಿಸರದ ಪ್ರತಿಭೆಗಳನ್ನು ಬೆಳಗಿಸಿದ, ಅವರ ಯಶಸ್ಸನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ “ಮಂಗಳೂರು ಆಕಾಶವಾಣಿ” ತಾನೇ ಸ್ವಯಂ-ಪ್ರಕಾಶವನ್ನು ಕಳೆದುಕೊಳ್ಳಬಾರದು. “ಮಂಗಳೂರು ಆಕಾಶವಾಣಿ” ತೆರೆಮರೆಗೆ ಸರಿದರೆ, ಇಲ್ಲಿ ದುಡಿಯುವವರಿಗೆ ಕೆಲಸವಿಲ್ಲ ಎಂಬುದಷ್ಟೇ ಆತಂಕವಲ್ಲ. ಈ ಧ್ವನಿ ಈಗ ಇರುವ ರೀತಿಯಲ್ಲಿಯೇ, ಇನ್ನಷ್ಟು ಮಧುರ-ಧ್ವನಿಯಾಗಿ ಮುಂದುವರಿಯಬೇಕು ಎಂದರೆ ಏನು ಮಾಡಬೇಕು?
ಕೆಲ ದಿನಗಳ ಹಿಂದೆ ಆಕಾಶವಾಣಿಯಲ್ಲಿ ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳ ಪ್ರಸಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂಬ ದೂರುಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಪ್ರಸಾರ ಭಾರತಿ ಇಂಥ ಯಾವುದೇ ಪ್ರಸ್ತಾಪ ನಮ್ಮಲ್ಲಿಲ್ಲ ಎಂದು ಹೇಳಿತು. ಹಾಗಾದರೆ ಒಳ್ಳೆಯದೇ.. ಆದರೆ ಮುಂದೆಯೂ ಅಂಥ ಸನ್ನಿವೇಶಗಳು ಉದ್ಭವವಾಗದೇ ಇರಲಿ. ತುಳು, ಕನ್ನಡ, ಕೊಂಕಣಿ ಸಾಹಿತ್ಯ ಅಕಾಡೆಮಿಗಳು, ಭಾಷಾಭಿಮಾನಿಗಳು, ಕವಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕಾಗಿದೆ. ನಿಮ್ಮ ಅನಿಸಿಕೆಗಳನ್ನು bantwalnews@gmail.com ಗೆ ಬರೆದು ಕಳುಹಿಸಬಹುದು.
Be the first to comment on "ನಮ್ಮ ಆಕಾಶವಾಣಿಯಲ್ಲಿರಲಿ ನಮ್ಮೂರ ಭಾಷೆ, ನಮ್ಮ ನೆಲದ ಅಸ್ಮಿತೆ"