ಶ್ರೇಷ್ಠ ಸಾಹಿತಿಯಷ್ಟೇ ಅಲ್ಲ, ಪ್ರೋತ್ಸಾಹಕರೂ ಆಗಿ ಹಲವರಿಗೆ ಮಾರ್ಗದರ್ಶಕರಾಗಿದ್ದವರು ಭೀಮ ಭಟ್ಟರು – ಪ್ರೊ. ರಾಜಮಣಿ ರಾಮಕುಂಜ
ಬಂಟ್ವಾಳ: ಬಂಟ್ವಾಳದ ಕನ್ನಡ ಭವನದಲ್ಲಿ ಭಾನುವಾರ ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟ ಜನ್ಮದಿನದ ಅಂಗವಾಗಿ ದಿ.ನೀರ್ಪಾಜೆ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ದಿ.ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಮಣಿ ರಾಮಕುಂಜ ಸಂಸ್ಮರಣಾ ಭಾಷಣ ಮಾಡಿದರು.
ಸಹೃದಯಿಯಾಗಿದ್ದ ದಿ.ನೀರ್ಪಾಜೆಯವರು, ಸಾಹಿತ್ಯ ಪ್ರೋತ್ಸಾಹಕರಷ್ಟೇ ಅಲ್ಲ, ಸಾಮಾಜಿಕ ಸೇವೆಯನ್ನೂ ಮಾಡಿದವರು. ಅದೆಷ್ಟೋ ಯುವ ಪ್ರತಿಭೆಗಳನ್ನು ಬೆಳೆಸಿದವರು. ಕಲ್ಹಣನ ರಾಜತರಂಗಿಣಿಯನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಪ್ರಸಿದ್ಧರಾದರೆ, ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ, ಸಹಕಾರ, ರಾಜಕೀಯ ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿದವರು. ಪ್ರತಿಯೊಂದು ಕ್ಷೇತ್ರವನ್ನು ಸ್ಪರ್ಶಿಸಿ, ಉಳಿದವರನ್ನು ಬೆಳೆಸಿದವರು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ದಿ. ನೀರ್ಪಾಜೆಯವರು ಕಂಡ ಕನಸು ಇಂದು ಕನ್ನಡ ಭವನವಾಗಿ ನನಸಾಗಿದೆ ಎಂದರು.ಕೈಕುಂಜೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸುರೇಶ ನೆಗಳಗುಳಿ, ಮಾಜಿ ಸಚಿವ ಹಾಗೂ ದಿ.ನೀರ್ಪಾಜೆ ಒಡನಾಡಿ ಬಿ.ರಮಾನಾಥ ರೈ, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಅಭಿಮಾನಿ ಬಳಗದ ಕೋಶಾಧಿಕಾರಿ ಕೊಳಕೆ ಗಂಗಾಧರ ಭಟ್, ದಿ.ನೀರ್ಪಾಜೆ ಅವರ ಪತ್ನಿ ಶಂಕರಿ ಅಮ್ಮ ಈ ಸಂದರ್ಭ ಉಪಸ್ಥಿತರಿದ್ದರು. ಕಸಾಪ ವತಿಯಿಂದ ಕಸಾಪ ಗೌ.ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ನೇತೃತ್ವದಲ್ಲಿ ದಿ.ನೀರ್ಪಾಜೆ ಭೀಮ ಭಟ್ಟರ ಪತ್ನಿ ಶಂಕರಿ ಅಮ್ಮ ಅವರನ್ನು ಗೌರವಿಸಲಾಯಿತು. ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ ಸುದರ್ಶನ ಜೈನ್ ಸ್ವಾಗತಿಸಿದರು. ಉಪನ್ಯಾಸಕ ವಿ.ಸು.ಭಟ್ ಕಾರ್ಯಕ್ರಮ ನಿರೂಪಿಸಿದರು. ಕಸಾಪದ ಶಿವಶಂಕರ್ ವಂದಿಸಿದರು. ಇದಕ್ಕೂ ಮುನ್ನ ಗೀತಗಾಯನ ನಡೆಯಿತು.
Be the first to comment on "ಬಂಟ್ವಾಳದಲ್ಲಿ ದಿ. ನೀರ್ಪಾಜೆ ಭೀಮ ಭಟ್ಟರ ಸಂಸ್ಮರಣೆ"