ಬಂಟ್ವಾಳ: ಬಿ.ಸಿ.ರೋಡ್ ಅಗ್ರಬೈಲ್ ನಿವಾಸಿ ಆರೆಸ್ಸೆಸ್ ಮುಖಂಡ ವೆಂಕಟರಮಣ ಹೊಳ್ಳ ಅವರು ಪುತ್ತೂರಿನ ಪೋಳ್ಯ ಎಂಬಲ್ಲಿ ಮಂಗಳವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಅಪಾರ ಅಭಿಮಾನಿಗಳೊಂದಿಗೆ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬಿ.ಸಿ.ರೋಡ್ ಅಗ್ರಬೈಲಿನಲ್ಲಿರುವ ಅವರ ಮನೆಯವರೆಗೆ ನಡೆಯಿತು. ಬಳಿಕ ಅಂತಿಮ ಸಂಸ್ಕಾರವನ್ನು ಮಾಡಲಾಯಿತು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಹೊಳ್ಳರ ಶಿಷ್ಯರೂ ಆಗಿರುವ ನಳಿನ್ ಕುಮಾರ್ ಕಟೀಲ್, ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್, ಪ್ರಾಂತ ರಾಷ್ಟ್ರಸೇವಿಕಾ ಸಮಿತಿ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಅಖಿಲ ಭಾರತೀಯ ಕುಟುಂಬ ಪ್ರಬೋಧನಾ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಪ್ರಚಾರಕ ದ.ಮ.ರವೀಂದ್ರ, ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್, ಪ್ರಾಂತ ಸಂಘಚಾಲಕ ವಾಮನ ಶೆಣೈ, ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ, ಪ್ರಾಂತದ ಸೇವಾ ಪ್ರಮುಖ ನ.ಸೀತಾರಾಮ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ವಿಶ್ವ ಹಿಂದು ಪರಿಷತ್ ಸಹಿತ ಸಂಘ ಪರಿವಾರದ ಪ್ರಮುಖರು ಅಂತಿಮ ದರ್ಶನ ಪಡೆದು ವೆಂಕಟರಮಣ ಹೊಳ್ಳ ಅವರು ಸಂಘಟನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಹೊಳ್ಳ ಅವರ ಮನೆಯಲ್ಲಿಯೇ ಸಂಘದ ಶಿಕ್ಷಣವನ್ನು ನೆನಪಿಸಿಕೊಂಡ ನಳಿನ್, ರಾಜ್ಯಾಧ್ಯಕ್ಷರಾಗಿ ಆಗಮಿಸಿದ ಸಂದರ್ಭ ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ನಲ್ಲಿ ಕಾರ್ಯಕ್ರಮವಿದ್ದ ವೇಳೆ ಅಲ್ಲೇ ಪಕ್ಕದಲ್ಲಿರುವ ಹೊಳ್ಳರ ಮನೆಗೆ ಭೇಟಿಯಾಗಿ ಆಶೀರ್ವಾದ ಪಡೆದಿದ್ದನ್ನು ಸ್ಮರಿಸಿಕೊಂಡರು.
Be the first to comment on "ಆರೆಸ್ಸೆಸ್ ಮುಖಂಡ ವೆಂಕಟರಮಣ ಹೊಳ್ಳ ನಿಧನ: ಸಂಸದ ಸಹಿತ ಗಣ್ಯರಿಂದ ಅಂತಿಮ ದರ್ಶನ"