ನೀರಿನ ಸಮಸ್ಯೆಯಾದರೆ ಯಾರನ್ನು ಕೇಳಬೇಕು? ಬಂಟ್ವಾಳ ಪುರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ವಿತರಣೆಯದ್ದೇ ಸದ್ದು

ಬಂಟ್ವಾಳ: ನೇತ್ರಾವತಿ ಪಕ್ಕದಲ್ಲೇ ಹರಿಯುತ್ತಿದ್ದರೂ ಬಂಟ್ವಾಳದಲ್ಲಿ ಕುಡಿಯುವ ನೀರಿನ ವಿತರಣೆಯದ್ದೇ ಆಗಾಗ ಸಮಸ್ಯೆ.ಇಡೀ ಬಂಟ್ವಾಳಕ್ಕೆ ಪೂರೈಕೆಯಾಗುವ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಮೊದಲನೇ ಹಂತದ ಕಾಮಗಾರಿಗಳು, ಕುಡಿಯುವ ನೀರಿಗೆ ಸಮಸ್ಯೆ, ಪೈಪ್ ಲೈನ್ ಸಮಸ್ಯೆ, ಅದರಿಂದಾಗಿ ರಸ್ತೆ ಹಾಳಾಗಿರುವುದು, ಹಳೇ ಲೈನ್ ನಲ್ಲೂ ನೀರು ಹರಿಯುತ್ತಿರುವುದು, ಹೊಸ ಕನೆಕ್ಷನ್ ಗಿರುವ ಗೊಂದಲ, ನೀರಿನ ಬಿಲ್ ನ ಗೊಂದಲ ಹಾಗೂ ಇದನ್ನೆಲ್ಲಾ ಯಾರಲ್ಲಿ ಪ್ರಶ್ನಿಸಬೇಕು ಎಂಬ ಬೃಹದಾಕಾರದ ಪ್ರಶ್ನೆ.

ಕಳೆದ ಕೆಲ ತಿಂಗಳುಗಳಿಂದ ಪುರಸಭೆಯ ಚುನಾಯಿತ ಪ್ರತಿನಿಧಿಗಳನ್ನು ಕಾಡುತ್ತಿದ್ದ ಈ ಸಮಸ್ಯೆಗಳೆಲ್ಲಾ ಪ್ರಶ್ನಾರೂಪದಲ್ಲಿ ಇಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೇಳಲಾಯಿತು. ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ ಅವರ ಬಳಿ ಪಕ್ಷಬೇಧ ಮರೆತು ಸದಸ್ಯರು ನೀರಿನ ಸಮಸ್ಯೆಗಳು ಹಾಗೂ ಅದಕ್ಕೆ ಸರಿಯಾಗಿ ದೊರಕದ ಸ್ಪಂದನೆ ಕುರಿತು ವಿವರಿಸಿದರು.

ಬಳಿಕ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ, ಬಂಟ್ವಾಳ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಮೊದಲ ಹಂತದಲ್ಲೇ ಗೊಂದಲಗಳು ಇರುವ ಕಾರಣ ಜನರ ದೂರುಗಳಿಗೆ ಸಮರ್ಪಕವಾಗಿ ಸ್ಪಂದಿಸಿದ ಬಳಿಕವಷ್ಟೇ ಎರಡನೇ ಹಂತದ ಯೋಜನೆಗೆ ಒಪ್ಪಿಗೆ ನೀಡಲಾಗುವುದೆಂದು ತಿಳಿಸಿದರು.

ಎರಡನೇ ಹಂತದ ಕುಡಿಯುವ ನೀರಿನ ವಿತರಣಾ ಕೊಳವೆ ಮಾರ್ಗಗಳನ್ನು ಅಳವಡಿಸುವ ಕಾಮಗಾರಿಯ ಅಂದಾಜು ಪಟ್ಟಿಯ ಮಂಜೂರಾದ ಮತ್ತು ಉದ್ಧೃತಾ ಅಂದಾಜುಪಟ್ಟಿಗೆ ಮೇಲುರುಜು ಮಾಡುವ ಕುರಿತು ಕ.ನ.ನೀ.ಸ. ಮತ್ತು ಒ.ಚ.ಮಂಡಳಿ ವಿಭಾಗದ ಕಾರ್ಯಪಾಲಕ ಅಭಿಯಂತರರ ಪತ್ರದ ಕುರಿತು ನಡೆದ ಚರ್ಚೆಯಲ್ಲಿ ಸ್ಪಷ್ಟ ಸೂಚನೆ ನೀಡಿದ ಅಧ್ಯಕ್ಷರು, ಮಂಡಳಿಯ ಮತ್ತು ಪುರಸಭೆಯ ಅಧಿಕಾರಿಗಳು ಒಂದು ತಿಂಗಳೊಳಗೆ ಜಂಟಿ ಸರ್ವೆ ನಡೆಸಿ ಸಮಸ್ಯೆಗಳ ಅಧ್ಯಯನ ನಡೆಸಬೇಕು. ಬಳಿಕ ಆ ವರದಿಯನ್ನು ಮುಂದಿನ ಕಲಾಪದ ವೇಳೆ ಮಂಡಿಸಬೇಕು. ಸರ್ವೆ ಸಂದರ್ಭ ಎಲ್ಲ ವಾರ್ಡುಗಳ ಸದಸ್ಯರ ಅಹವಾಲು ಆಲಿಸಿ ಸಮಗ್ರ ವರದಿಯನ್ನು ಒದಗಿಸಬೇಕು, ಸಾರ್ವಜನಿಕರ ಪ್ರತಿನಿಧಿಗಳ ಸಂಶಯಗಳನ್ನು ಪರಿಹರಿಸಬೇಕು ಎಂದು ಹೇಳಿದರು. ಈ ಕುರಿತ ನಿರ್ಣಯವನ್ನು ಪುರಸಭೆಯಲ್ಲಿ ಮಾಡಲಾಯಿತು.

ಬಾರೆಕಾಡು ಆಶ್ರಯ ಕಾಲೊನಿಗೆ ಹಕ್ಕುಪತ್ರ ದೊರಕದ ವಿಚಾರ,  ಕಸ ಸಂಗ್ರಹ ಕುರಿತು ಹಿಂದಿನ ಮೀಟಿಂಗ್ ನಲ್ಲಿ ಮಾಡಿದ ನಿರ್ಣಯ ಡಬ್ಬಲ್ ಟ್ಯಾಕ್ಸ್ ವಿಧಿಸಿ ಡೋರ್ ನಂಬರ್ ನೀಡುವ ವಿಚಾರ, ಬೋಗೋಡಿ ಪರಿಸರದಲ್ಲಿ ಗ್ಯಾಸ್ ಬಂಕ್ ಗೆ ಅನುಮತಿ, ರಾ.ಹೆ.ಅಗಲೀಕರಣ ವೇಳೆ ಗೂಡಂಗಡಿ ತೆರವು ವಿಚಾರ, ಪ.ಜಾತಿ, ಪಂಗಡಕ್ಕೆ ವಿದ್ಯುತ್ ಬಿಲ್ ಮನ್ನಾ ಸಹಿತ ಹಲವು ವಿಚಾರಗಳು ಚರ್ಚೆಗೆ ಬಂದವು.

ಬಿಜೆಪಿಯಿಂದ ಹಿರಿಯ ಸದಸ್ಯ ಎ. ಗೋವಿಂದ ಪ್ರಭು, ದೇವಕಿ, ವಿದ್ಯಾವತಿ, ಕಾಂಗ್ರೆಸ್ ಪಕ್ಷದಿಂದ ಪಿ.ರಾಮಕೃಷ್ಣ ಆಳ್ವ, ಲುಕ್ಮಾನ್, ಬಿ.ವಾಸು ಪೂಜಾರಿ, ಗಂಗಾಧರ, ಮಹಮ್ಮದ್ ನಂದರಬೆಟ್ಟು, ಅಬುಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ, ಜನಾರ್ದನ ಚಂಡ್ತಿಮಾರ್, ಎಸ್.ಡಿ.ಪಿ.ಐನಿಂದ ಸದಸ್ಯರಾದ ಮುನೀಶ್ ಆಲಿ,  ಝೀನತ್ ಫಿರೋಜ್, ಸಂಶದ್ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತರಿದ್ದರು.

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ನೀರಿನ ಸಮಸ್ಯೆಯಾದರೆ ಯಾರನ್ನು ಕೇಳಬೇಕು? ಬಂಟ್ವಾಳ ಪುರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ವಿತರಣೆಯದ್ದೇ ಸದ್ದು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*