ಬಂಟ್ವಾಳ ತಾಲೂಕಿನ ವಿಟ್ಲ ಮತ್ತು ಬಿ.ಸಿ.ರೋಡ್ ಹೃದಯಭಾಗದಲ್ಲಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಎದುರು ಹಿಂಡುಹಿಂಡಾಗಿ ನಾಯಿಗಳು ಓಡಾಡುತ್ತಿರುವುದು ಮಾಮೂಲು ದೃಶ್ಯವಾದರೆ, ವಿಟ್ಲ ಪೇಟೆಯಲ್ಲಿ ನಾಯಿ ಕಚ್ಚಿ ಏಳು ಮಂದಿ ಗಾಯಗೊಂಡಿದ್ದಾರೆ. ವಿಟ್ಲದಲ್ಲಂತೂ ಕಚ್ಚಿದ ನಾಯಿ ಹುಚ್ಚುನಾಯಿಯಾಗಿದೆ ಎನ್ನಲಾಗಿದ್ದು, ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ನಾಯಿ ಕಡಿತದಿಂದ ಗಾಯಗೊಂಡವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗೊಂಡಿದ್ದು, ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಣ್ಣಮಟ್ಟದ ಗಾಯಗೊಂಡವರು ವಿಟ್ಲದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ವಿಟ್ಲ ಬೊಬ್ಬೆಕೇರಿ ಮೂಲಕ ಬಂದ ಹುಚ್ಚು ನಾಯಿಯೊಂದು ಪೇಟೆವರೆಗೆ ಓಡಾಡಿ ದಾರಿಯಲ್ಲಿ ಸಿಕ್ಕಿದವರಿಗೆಲ್ಲ ಕಚ್ಚಿ ಗಾಯಗೊಳಿಸಿದೆ ಎನ್ನಲಾಗಿದೆ. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಫ್ರೆಂಡ್ಸ್ ವಿಟ್ಲ ತಂದ ಮುರಳೀಧರ ಅವರ ತಂಡ ಹುಚ್ಚು ನಾಯಿಯನ್ನು ಹಿಡಿಯುವಲ್ಲಿ ಯಶಶ್ವಿಯಾಗಿದ್ದಾರೆ. ಇನ್ನೂ ಅನೇಕ ಬೀದಿ ನಾಯಿಗಳಿಗೆ ಇದು ಕಚ್ಚಿದ್ದು, ಜನರಲ್ಲಿ ಆತಂಕ ನೆಲೆ ಮಾಡಿದೆ.
ಬಿ.ಸಿ.ರೋಡ್ ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ರಾತ್ರಿಯಾಗುತ್ತಿದ್ದಂತೆಯೇ ನಾಯಿಗಳ ಹಿಂಡು ಜಾಸ್ತಿಯಾಗುತ್ತದೆ. ಬೆಳಗ್ಗೆ ವಾಕಿಂಗ್ ಹೋಗುವವರನ್ನೂ ಹಿಂಬಾಲಿಸುತ್ತದೆ. ತಿನಿಸಿನ ಆಸೆ, ಕಸದ ರಾಶಿಯನ್ನು ಎಳೆದಾಡುವುದನ್ನು ನಾಯಿಗಳು ಮಾಡುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಾಗಿದೆ.
Be the first to comment on "ವಿಟ್ಲ, ಬಿ.ಸಿ.ರೋಡ್ ನಲ್ಲಿ ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ನಾಯಿಗಳ ಹಿಂಡು"