ಬಂಟ್ವಾಳ: ತೀವ್ರ ಹದಗೆಟ್ಟಿರುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಭಾಗಗಳಲ್ಲಿ ಸೋಮವಾರದಿಂದಲೇ ಹೊಂಡ ಮುಚ್ಚುವ ಹಾಗೂ ದುರಸ್ತಿ ಕಾರ್ಯಗಳನ್ನು ಆರಂಭಿಸುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರುಗಳು ಭರವಸೆ ನೀಡಿದನ್ವಯ, ಎಸ್.ಡಿ.ಪಿ.ಐ. ನಡೆಸಲುದ್ದೇಶಿಸಿದ ಪ್ರತಿಭಟನೆಯನ್ನು ತಾತ್ಕಾಲಿವಾಗಿ ಕೈಬಿಟ್ಟಿದೆ. ಶುಕ್ರವಾರ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪಕ್ಷದ ಮುಖಂಡರು ಬಂಟ್ವಾಳ ನಗರ ಠಾಣಾ ಪೊಲೀಸರ ಮಧ್ಯಸ್ತಿಕೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಪರವಾಗಿ ಆಗಮಿಸಿದ್ದ ಇಂಜಿನಿಯರುಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ.
ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಮುಚ್ಚುವಂತೆ ಆಗ್ರಹಿಸಿ ನ.5ರಂದು ಹೆದ್ದಾರಿ ತಡೆ ಚಳವಳಿ ನಡೆಸಲು ಎಸ್.ಡಿ.ಪಿ.ಐ. ತೀರ್ಮಾನಿಸಿತ್ತು. ಸಮಸ್ಯೆ ಬಗೆ ಹರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ನಮ್ಮ ಜೊತೆ ಚರ್ಚೆ ನಡೆಸಲು ಅವಕಾಶ ಮಾಡಲಾಗುವುದು ಎಂದು ಪೊಲೀಸರು ಮಾಡಿದ ಮನವಿಗೆ ಸ್ಪಂದಿಸಿ ಹೆದ್ದಾರಿ ತಡೆ ಚಳವಳಿಯನ್ನು ಆ ದಿನ ಕೈ ಬಿಡಲಾಗಿತ್ತು. ಅದರಂತೆ ಇಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು ನವೆಂಬರ್ 9ರಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಸೋಮವಾರದಿಂದ ಕಾಮಗಾರಿ ಆರಂಭಿಸದಿದ್ದರೆ ಕಲ್ಲಡ್ಕದಿಂದ ಪಾಣೆಮಂಗಳೂರು ವರೆಗೆ ಜಾಥ ನಡೆಸಿ ಪಾಣೆಮಂಗಳೂರು ಮಾಂಡೋವಿ ಕಾರು ಶೋರೂಂ ಬಳಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಹಾಗೂ ಈ ಕುರಿತು ಇಲಾಖೆ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಯೋಚಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಸಹಾಯಕ ಇಂಜಿನಿಯರ್ ಅನಿರುದ್ದ್, ಸೈಟ್ ಇಂಜನಿಯರ್ ನಾಸಿರ್ ಬಂಟ್ವಾಳ ನಗರ ಠಾಣೆ ಎಸ್.ಐ. ಅವಿನಾಶ್ ಉಪಸ್ಥಿತಿಯಲ್ಲಿ ಮಾತನಾಡಿದರು. ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಪ್ರಮುಖರಾದ ಮಾಲಿಕ್ ಕೊಳಕೆ, ಸತ್ತಾರ್ ಕಲ್ಲಡ್ಕ, ಇಕ್ಬಾಲ್ ನಂದರಬೆಟ್ಟು, ಉಬೈದ್ ಬಂಟ್ವಾಳ, ರವೂಫ್ ಕಲಾಯಿ, ಫೈಝಲ್ ಮಂಚಿ ಉಪಸ್ಥಿತರಿದ್ದರು.
Be the first to comment on "ಹೆದ್ದಾರಿ ಗುಂಡಿಗಳಿಗೆ ಮೋಕ್ಷ, ಸೋಮವಾರದಿಂದ ಕೆಲಸ – ಪ್ರತಿಭಟನೆಗೆ ಮುಂದಾದ ಎಸ್.ಡಿ.ಪಿ.ಐ.ಗೆ ಅಧಿಕಾರಿಗಳ ಭರವಸೆ"