ಬಂಟ್ವಾಳ ತಾ.ಪಂ.ನ ಮಾಸಿಕ ಕೆಡಿಪಿ ಸಭೆಯು ಬುಧವಾರ ಬಿ.ಸಿ.ರೋಡಿನಲ್ಲಿರುವ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿ, ತಾಲೂಕಿನಲ್ಲಿ ಪ್ರಥಮ ಹಂತದ ಶಿಬಿರದಲ್ಲಿ ಸುಮಾರು 4,500 ರಷ್ಟು ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, ಆದರೆ ನಮ್ಮ ಜನಸಂಖ್ಯೆಗೆ ಹೋಲಿಸಿದರೆ ಶೇ. 10ರವರೂ ಪರೀಕ್ಷೆ ನಡೆದಿಲ್ಲ. ಹೀಗಾಗಿ ಹೆಚ್ಚಿನ ಜನರು ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಈ ವೇಳೆ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ, ಗ್ರಾ.ಪಂ.ಆಡಳಿತದ ಜವಾಬ್ದಾರಿಯೂ ಇರುವ ಕಾರಣ ಪ್ರಚಾರ ಕಾರ್ಯ ಹಾಗೂ ಪ್ರಮುಖರೊಂದಿಗೆ ಸಭೆ ನಡೆಸುವಂತೆ ತಿಳಿಸಿದರು.ಜಾನುವಾರುಗಳನ್ನು ಸಾಗಾಟ ಮಾಡುವ ವೇಳೆ ಪಶು ಸಂಗೋಪನಾ ಇಲಾಖೆಯ ಹೋಬಳಿ ಮಟ್ಟದ ಅಧಿಕಾರಿಗಳ ಅನುಮತಿ ಅಗತ್ಯವಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿ ತಾ.ಪಂ.ಇಒ ಅವರ ಪ್ರಶ್ನೆಗೆ ಉತ್ತರಿಸಿದರು.
ತೋಟಗಾರಿಕೆ ಇಲಾಖೆಯು ಕಾರ್ಯಾಚರಿಸುತ್ತಿರುವ ಸ್ಥಳವನ್ನು ಇಲಾಖೆ ಹೆಸರಿಗೆ ಮಾಡುವಂತೆ ಸರ್ವೇ ಮಾಡಿಸಿ ತಹಶೀಲ್ದಾರ್ ಅವರಿಗೆ ಬರೆಯಲಾಗಿದೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ತಿಳಿಸಿದಾಗ, ಅದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪುರಸಭೆಯು ನಿರಾಕ್ಷೇಪಣಾ ನೀಡಬೇಕಿದೆ ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್.ತಿಳಿಸಿದರು.
ಚೆನ್ನೈತೋಡಿ ಗ್ರಾ.ಪಂ.ನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡುವುದಕ್ಕೆ 20 ಸೆಂಟ್ಸ್ ಜಾಗ ಮಾತ್ರ ಇದ್ದು, ಕನಿಷ್ಠ ಅರ್ಧ ಎಕರೆಯಾದರೂ ಬೇಕಾಗುತ್ತದೆ ಎಂದು ಗ್ರಾ.ಪಂ.ನ ಆಡಳಿತಾಧಿಕಾರಿಯಾಗಿರುವ ಪ್ರದೀಪ್ ಡಿಸೋಜಾ ಅವರು ಮನವಿ ಮಾಡಿದರು. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ"