ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟು: ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ಏನೇನಿದೆ?

ದ.ಕ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಸರಕಾರದ ಪ್ರಸಕ್ತ ಸಾಲಿನ ಅಕ್ಟೋಬರ್ 1ರ ಆದೇಶ ತೆರವು -5 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ಕಂಟೈನ್ ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಕಾಲಂ 26(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದ.ಕ ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷನಾಗಿ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 4 ರಲ್ಲಿ ಪ್ರದತ್ತವಾದ ಅಧಿಕಾರದಂತೆ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಾಜೇಂದ್ರ ಕೆ.ವಿ ಈ ಕೆಳಗಿನಂತೆ ಆದೇಶ ಹೊರಡಿಸಿರುತ್ತಾರೆ.

ಶಾಲಾ ಕಾಲೇಜುಗಳು:

ಶಾಲೆಗಳು, ಕಾಲೇಜುಗಳ, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು 15 ನೇ ಅಕ್ಟೋಬರ್ 2020 ರ ನಂತರ ಹಂತ-ಹಂತವಾಗಿ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಸಂಬಂಧಪಟ್ಟ ಶಾಲೆಯ/ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ನಿರ್ಧರಣೆಯ ಆಧಾರದ ಮೇಲೆ ಮತ್ತು ಈ ಕೆಳಕಂಡ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು.  ಆನ್ ಲೈನ್ /ದೂರಶಿಕ್ಷಣ ಕಲಿಕೆಗಳಿಗೆ ಆದ್ಯತಾನುಸಾರ ಅನುಮತಿ ಮುಂದುವರಿಸಬೇಕು ಮತ್ತು ಪ್ರೋತ್ಸಾಹಿಸಲಾಗುವುದು.  ಶಾಲೆಗಳು ಆನ್ ಲೈನ್  ತರಗತಿಗಳನ್ನು ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳು ಖುದ್ದಾಗಿ ಶಾಲೆಗೆ ಹಾಜರಾಗುವುದಕ್ಕೆ ಬದಲಾಗಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಆಯ್ಕೆ ಮಾಡಿಕೊಂಡಲ್ಲಿ, ಹಾಗೆ ಮಾಡಲು ಅವರಿಗೆ ಅನುಮತಿ ನೀಡುವುದು. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಮತ್ತು ಪೋಷಕರ ಲಿಖಿತ ಅನುಮತಿಯೊಂದಿಗೆ ಮಾತ್ರವೇ ಶಾಲೆಗಳಿಗೆ /ಸಂಸ್ಥೆಗಳಿಗೆ ಹಾಜರಾಗಬಹುದಾಗಿದೆ.  ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು ಮತ್ತು ಅದು ಸಂಪೂರ್ಣವಾಗಿ ಪೋಷಕರ ಅನುಮತಿಯ ಮೇಲೆ ಅವಲಂಬಿತವಾಗಿರಬೇಕು. ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮಾಲೋಚಿಸಿ ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಮಂತ್ರಾಲಯ ಭಾರತ ಸರ್ಕಾರ ಇವರು ಹೊರಡಿಸಲಿರುವ ಮಾದರಿ ಕಾರ್ಯನಿರ್ವಹಣಾ ಪ್ರಕ್ರಿಯೆ ಯನ್ನು ಶಾಲೆಗಳು/ ಸಂಸ್ಥೆಗಳು ಪಾಲಿಸಬೇಕು.

ಪರಿಸ್ಥಿತಿ ಆಧಾರದ ಮೇಲೆ ತೀರ್ಮಾನ:

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳು/ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಸಮಯ ಕುರಿತಂತೆ ಉನ್ನತ ಶಿಕ್ಷಣ ಇಲಾಖೆ ಶಿಕ್ಷಣ ಮಂತ್ರಾಲಯ , ಭಾರತ ಸರ್ಕಾರದ ಇದರೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ನಿರ್ಧಾರಣೆಯ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಿದ್ದು, ಆನ್ ಲೈನ್ /ದೂರಶಿಕ್ಷಣ ಕಲಿಕೆಗಳಿಗೆ ಆದ್ಯತಾನುಸಾರ ಅನುಮತಿ ಮುಂದುವರಿಸಬೇಕು ಮತ್ತು ಪ್ರೋತ್ಸಾಹಿಸಬೇಕು.  ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಾಜ್ಞಾನ ಅಧ್ಯಯನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್ ಡಿ) ಮತ್ತು ಸ್ನಾತಕೋತರ ವಿದ್ಯಾರ್ಥಿಗಳಿಗಾಗಿ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ 15 ಅಕ್ಟೋಬರ್ 2020 ರಿಂದ ಈ ಕೆಳಕಂಡಂತೆ ಅನುಮತಿ ನೀಡಲಾಗುವುದು.

ಕೇಂದ್ರ ಹಣಕಾಸು ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ , ಸಂಸ್ಥೆಯ ಮುಖ್ಯಸ್ಥರು ವಿಜ್ಞಾನ ಮತ್ತು ತಂತ್ರಜ್ಞಾನ ಆಧ್ಯಯನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್ ಡಿ) ಮತ್ತು ಸ್ನಾತಕೋತರ ವಿದ್ಯಾರ್ಥಿಗಳು ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳಿಗಾಗಿ ಕಾಲೇಜುಗಳಿಗೆ ಹಾಜರಾಗುವುದು ಅತ್ಯಗತ್ಯವಿದೆ ಎಂಬುದನ್ನು ಸ್ವತ: ಮನವರಿಕೆ ಮಾಡಿಕೊಳ್ಳಲಾಗುವುದು.    ವಿಶ್ವವಿದ್ಯಾಲಯಗಳು , ಖಾಸಗಿ ವಿಶ್ವವಿದ್ಯಾಲಯಗಳು ಮೊದಲಾದ ಇತರೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ತೆಗೆದುಕೊಳ್ಳುವ ತೀರ್ಮಾನಕ್ಕನುಸಾರವಾಗಿ ಪ್ರಯೋಗಾಲಯ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಅಗತ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಷಯದಲ್ಲಿನ ಸಂಶೋಧನಾ ವಿದ್ಯಾರ್ಥಿಗಳು (ಪಿಎಚ್ ಡಿ) ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಲಾಗುವುದು.

ಕ್ರೀಡಾಪಟುಗಳಿಗೆ ಈಜುಕೊಳ ತೆರವಿಗೆ ಅನುಮತಿ:

ಕ್ರೀಡಾಪಟುಗಳ ತರಬೇತಿಗಾಗಿ ಬಳಸುತ್ತಿರುವ ಈಜುಕೊಳಗಳನ್ನು ಪ್ರಸಕ್ತ ಸಾಲಿನ ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ ತೆರೆಯಲು ಅನುಮತಿ ನಿಡಲಾಗುವುದು. ಇದಕ್ಕಾಗಿ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯ ಮಾದರಿ ಕಾರ್ಯುನಿರ್ವಹಣಾ ಪ್ರಕ್ರಿಯೆ  ಯನ್ನು ಹೊರಡಿಸಲಿವೆ.

ಸಿನಿಮಾ, ರಂಗಮಂದಿರ ಓಪನ್:
ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರವೇ ಸಿನಿಮಾ ಮಂದಿರಗಳು / ರಂಗಮಂದಿರಗಳು / ಮಲ್ಟಿಫ್ಲೆಕ್ಸ್ ಗಳನ್ನು  ಪ್ರಸಕ್ತ ಸಾಲಿನ ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ ಅವುಗಳ ಒಟ್ಟು ಆಸನ ಸಾಮಥ್ರ್ಯದ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ತೆರೆಯಲು ಅನುಮತಿಸಲಾಗುವುದು. ಇದಕ್ಕಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಚಾರ ಮಂತ್ರಾಲಯಗಳು ಮಾದರಿ ಕಾರ್ಯನಿರ್ವಹಣಾ ಪ್ರಕ್ರಿಯೆ ಯನ್ನು ಹೊರಡಿಸಲಿವೆ.  ಮನೋರಂಜನಾ ಉದ್ಯಾನಗಳು ಮತ್ತು ಅದೇ ರೀತಿಯ ಸ್ಧಳಗಳನ್ನು ಪ್ರಸಕ್ತ ಸಾಲಿನ ಅಕ್ಟೋಬರ್ 15  ರಿಂದ ಜಾರಿಗೆ ಬರುವಂತೆ ತೆರೆಯಲು ಅನುಮತಿಸಲಾಗುವುದು. ಇದಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮಾದರಿ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ಹೊರಡಿಸಲಿವೆ.

ಗರಿಷ್ಠ 100 ಜನರ ಪರಿಮಿತಿ:

ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ವ್ಯಾಪಾರದಿಂದ ವ್ಯಾಪಾರಕ್ಕೆಪ್ರದರ್ಶನಗಳನ್ನು ಪ್ರಸಕ್ತ ಸಾಲಿನ ಅಕ್ಟೋಬರ್ 15 ರಿಂದ ತೆರೆಯಲು ಅನುಮತಿಸಲಾಗುವುದು. ಇದಕ್ಕಾಗಿ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಭಾರತ ಸರ್ಕಾರದ ವಾಣಿಜ್ಯ ಇಲಾಖೆಗಳು ಮಾದರಿ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ಹೊರಡಿಸಲಿವೆ.  ಕಂಟೈನ್ ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಗರಿಷ್ಠ 100 ಜನರ ಪರಿಮಿತಿಗೆ ಒಳಪಟ್ಟು ಸಾಮಾಜಿಕ/ ಶೈಕ್ಷಣಿಕ/ ಕ್ರೀಡೆ / ಮನೋರಂಜನೆ/ ಸಾಂಸ್ಕøತಿಕ/ ಧಾರ್ಮಿಕ/ ರಾಜಕೀಯ ಕಾರ್ಯಕ್ರಮಗಳು ಮತ್ತು ಇತರ ಸಮಾರಂಭಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ. 100 ಜನರ ಮಿತಿಯನ್ನು ಮೀರಿ ಸೇರುವ ಅಂತಹ ಬೃಹತ್ ಸಭೆಗಳಿಗೆ ಪ್ರಸಕ್ತ ಸಾಲಿನ ಅಕ್ಟೋಬರ್ 15 ರ ನಂತರ ಮತ್ತು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಮಂಗಳೂರು ಮಹಾನಗರ ಪಾಲಿಕೆ/ಸ್ಥಳೀಯ ಸಂಸ್ಥೆಗಳು ಕಂಟೈನ್‍ಮೆಂಟ್ ವಲಯಗಳ ಹೊರಗೆ ಅನುಮತಿಯನ್ನು ನೀಡಬಹುದಾಗಿದೆ.

ಒಳಾಂಗಣದಲ್ಲಿ 200 ಮಂದಿಗೆ ಪರಿಮಿತಿ:

ಒಳಾಂಗಣ ಸ್ಥಳಗಳಲ್ಲಿ 200 ಜನರ ಪರಿಮಿತಿಗೆ ಒಳಪಟ್ಟು ಸಭಾ ಭವನದ ಒಟ್ಟು ಸಾಮಥ್ರ್ಯದ ಗರಿಷ್ಠ ಶೇ.50% ರಷ್ಟಕ್ಕೆ ಮಾತ್ರ ಅನುಮತಿ ನೀಡಲಾಗುವುದು. ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ. ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈತೊಳೆಯುವಿಕೆ ಅಥವಾ ಸ್ಯಾನಿಟೈಜರ್ ವ್ಯವಸ್ದೆಯನ್ನು ಕಡ್ಡಾಯಗೊಳಿಸಿ ಅನುಮತಿ ನೀಡಲಾಗುವುದು. ಹೊರಾಂಗಣ ಸ್ಥಳಗಳಲ್ಲಿ, ಮೈದಾನದ/ ಸ್ಥಳದ ವಿಸ್ತೀರ್ಣವನ್ನು ಗಮನದಲ್ಲಿಟ್ಟುಗೊಂಡು ಮತ್ತು ಸಾಮಾಜಿಕ ಅಂತರದ ಕಟ್ಟುನಿಟ್ಟಿನ ಪಾಲನೆ, ಮುಖಗವಸು ಧರಿಸುವಿಕೆ, ಥರ್ಮಲ್ ಸ್ಕ್ಯಾನಿಂಗ್ ಮತ್ತು ಕೈತೊಳೆಯುವಿಕೆ ಅಥವಾ ಸ್ಯಾನಿಟೈಜರ್ ವ್ಯವಸ್ದೆಯನ್ನು ಕಡ್ಡಾಯಗೊಳಿಸಿ ಅನುಮತಿ ನೀಡಲಾಗುವುದು.
ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಮಾಲೋಚಿಸಿ, ಅಂತಹ ಸಭೆ ಸಮಾರಂಭಗಳನ್ನು ನಿಯಂತ್ರಿಸಲು ಹೊರಡಿಸುವ ಮಾದರಿ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ. ಗೃಹ ವ್ಯವಹಾರ ಮಂತ್ರಾಲಯವು ಅನುಮತಿಸಿದ ವಿಮಾನ ಪ್ರಯಾಣವನ್ನು ಹೊರತುಪಡಿಸಿ ಅಂತರ-ರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಇರಲಿದೆ.

ಕಂಟೈನ್ ಮೆಂಟ್ ವಲಯಗಳಿಗೆ ಸೀಮಿತವಾದ ಲಾಕ್ ಡೌನ್ :

ಕಂಟೈನ್ ಮೆಂಟ್ ವಲಯ ಗಳಲ್ಲಿನ ಲಾಕ್ ಡೌನ್ ಪ್ರಸಕ್ತ ಸಾಲಿನ ಅಕ್ಟೋಬರ್ 31 ರವರೆಗೆ ಮುಂದುವರೆಯಲಿದೆ. ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯನ್ನು ಗಣನೆಗೆ ತೆಗೆದುಕೊಂಡು ಮಹಾನಗರ ಪಾಲಿಕೆ/ ಜಿಲ್ಲಾ ಪ್ರಾಧಿಕಾರಗಳು ತಳ ಮಟ್ಟದಲ್ಲಿ ಕಂಟೈನ್ ಮೆಂಟ್ ವಲಯಗಳನ್ನು ಗುರುತಿಸಲಾಗುವುದು. ಈ ಕಂಟೈನ್ ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಿ ಮತ್ತು ಅತ್ಯವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗವುದು. ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಮತ್ತು ಅವಶ್ಯಕ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಯ್ದುಕೊಳ್ಳುವುದಕ್ಕೆ ಹೊರತುಪಡಿಸಿ, ಈ ವಲಯಗಳಲ್ಲಿ ಅಥವಾ ವಲಯಗಳ ಹೊರಗೆ ಜನರ ಓಡಾಟವಿರದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣ ಇರಬೇಕು. ಕಂಟೈನ್ ಮೆಂಟ್ ವಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತೀವ್ರ ಸಂಪರ್ಕ ಪತ್ತೆ ಹಚ್ಚುವಿಕೆ, ಮನೆ-ಮನೆಗೆ ಕಣ್ಗಾವಲು ಮತ್ತು ಇತರ ಕ್ಲಿನಿಕಲ್ ಮಧ್ಯಸ್ಥಿಕೆಗಳು ಇರಬೇಕು. ಮೇಲ್ಕಂಡ ಉದ್ದೇಶಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುವುದು.
ಈ ಕಂಟೈನ್ ಮೆಂಟ್ ವಲಯಗಳನ್ನು ಸಂಬಂಧಪಟ್ಟ ಆಯುಕ್ತರು, ಮಹಾನಗರ ಪಾಲಿಕೆ ಹಾಗೂ  ಜಿಲ್ಲಾಧಿಕಾರಿ ಕಚೇರಿ ವೆಬ್ ಸೈಟ್ ಗಳಲ್ಲಿ ಅಧಿಸೂಚಿಸಿ, ಈ ಕುರಿತ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯಕ್ಕೆ (ಎಂಓಹೆಚ್ ಎಫ್ ಡಬ್ಲ್ಯೂ) ತಿಳಿಸಲಾಗುವುದು.

 ಜಿಲ್ಲಾಧಿಕಾರಿಯವರೊಂದಿಗೆ ಪೂರ್ವಸಮಾಲೋಚನೆ ನಡೆಸದೇ, ಕಂಟೈನ್ ಮೆಂಟ್ ವಲಯಗಳ ಹೊರಗೆ ಯಾವುದೇ ಸ್ಥಳೀಯ ಲಾಕ್ ಡೌನ್ ನ್ನು (ಮಹಾನಗರ ಪಾಲಿಕೆ /ತಾಲ್ಲೂಕು/ ನಗರ ಸ್ಥಳೀಯ ಸಂಸ್ಥೆ/ ಗ್ರಾಮ ಪಂಚಾಯಿತಿ/ ಗ್ರಾಮ ಮಟ್ಟ) ವಿಧಿಸತಕ್ಕದ್ದಲ್ಲ.

ನಿರ್ಬಂಧ ಇಲ್ಲ:
ಜಿಲ್ಲೆಯೊಳಗೆ ಹಾಗೂ ಜಿಲ್ಲೆಯ ಹೊರಗೆ ಓಡಾಟಕ್ಕೆ ಯಾವುದೇ ನಿಬರ್ಂಧವಿರುವುದಿಲ್ಲ.   ಜಿಲ್ಲೆಯೊಳಗೆ ಮತ್ತು ಜಿಲ್ಲೆಯ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಹಾಗೂ ಸರಕುಗಳ ಸಾಗಣೆಗೆ ಯಾವುದೇ ನಿಬರ್ಂಧವಿರುವುದಿಲ್ಲ ಇಂತಹ ಓಡಾಟಕ್ಕೆ ಯಾವುದೇ ಪ್ರತ್ಯೇಕ ಅನುಮತಿ/ಅನುಮೋದನೆ/ಇ-ಪರ್ಮಿಟ್ ಅಗತ್ಯವಿರುವುದಿಲ್ಲ. ಆದಾಗ್ಯೂ, ಇತರೇ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಜನರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಗಳು ಹೊರಡಿಸಿದ ಚಾಲ್ತಿಯಲ್ಲಿರುವ  ಮಾರ್ಗಸೂಚಿಗಳು /ಎಸ್ ಓಪಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

 ಎಸ್.ಓ.ಪಿ.ಗಳ ಅನುಸಾರ ವ್ಯಕ್ತಿಗಳ ಚಲನೆ:

ಪ್ರಯಾಣಿಕರ ರೈಲುಗಳ ಚಲನೆ, ದೇಶೀಯ ಪ್ರಯಾಣಿಕರ ವಿಮಾನ ಪ್ರಯಾಣ, ವಂದೇ ಭಾರತ್ ಮತ್ತು ಏರ್ ಟ್ರಾನ್ಸ್ ಪೋರ್ಟ್ ಬಬಲ್ ಫ್ಲೈಟ್ ಗಳಲ್ಲಿ ವ್ಯಕ್ತಿಗಳ ಓಡಾಟ ಮತ್ತು ಭಾರತೀಯ ಪ್ರಯಾಣಿಕ/ಸರಕು ಸಾಗಾಣೆ ಹಡಗುಗಳ ಆಗಮನ ಮತ್ತು ನಿರ್ಗಮನದ ಮೇಲೆ ಭಾರತ ಸರಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿದ ಎಸ್.ಓ.ಪಿ.ಗಳಿಗೆ ಅನುಸಾರವಾಗಿ ನಿಯಂತ್ರಣ ಮುಂದುವರೆಯುತ್ತದೆ.

ದುರ್ಬಲ ವ್ಯಕ್ತಿಗಳ ರಕ್ಷಣೆಗೆ ಕ್ರಮ:

65 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವ್ಯಕ್ತಿಗಳು, ಬಹು-ಅಸ್ವಸ್ತತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಗತ್ಯ ಮತ್ತು ಆರೋಗ್ಯ ಉದ್ಧೇಶಗಳನ್ನು ಹೊರತು ಪಡಿಸಿ ಮನೆಯಲ್ಲಿಯೇ ಇರಲು ಸಲಹೆ ನೀಡಲಾಗಿದೆ.

ಆರೋಗ್ಯ ಸೇತು ಬಳಕೆ:

ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಆರೋಗ್ಯ ಸೇತು ಅನುವು ಮಾಡಿ ಕೊಡುತ್ತದೆ.  ಮತ್ತು ಇದು ವ್ಯಕ್ತಿಗಳು ಹಾಗೂ ಸಮುದಾಯಕ್ಕೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ.
ಉದ್ಯೋಗದಾತರು, ಕಚೇರಿಗಳು ಮತ್ತು ಕರ್ತವ್ಯ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ಧೇಶದಿಂದ, ಉತ್ತಮ ಪ್ರಯತ್ನದ ಆಧಾರದ ಮೇಲೆ, ಎಲ್ಲಾ ಉದ್ಯೋಗಿಗಳು ಆರೋಗ್ಯ ಸೇತು ಆಪ್ ನ್ನು ಅಳವಡಿಸಿ ಕೊಳ್ಳುವ ಸೌಲಭ್ಯ ಹೊಂದಿರುವ ಮೊಬೈಲ್ ಫೋನ್ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು.  ಜಿಲ್ಲೆಯಲ್ಲಿ ಪ್ರತಿಯೊಬ್ಬರು ಆರೋಗ್ಯ ಸೇತು ಆಪ್ ನ್ನು ಅಳವಡಿಸಿಕೊಳ್ಳುವ ಸೌಲಭ್ಯವಿರುವ ತಮ್ಮ ಮೊಬೈಲ್ ಫೋನ್ ಗಳಲ್ಲಿ ಆರೋಗ್ಯ ಸೇತು ಆಪ್ ನ್ನು ಅಳವಡಿಸಲು ಮತ್ತು ಆಪ್ ನಲ್ಲಿ ನಿಯಮಿತವಾಗಿ ತಮ್ಮ ಆರೋಗ್ಯ ಸ್ಥಿತಿಯನ್ನು ಇಂದೀಕರಿಸಿಕೊಳ್ಳುವಂತೆ  ವ್ಯಕ್ತಿಗಳಿಗೆ ಸಲಹೆ ನೀಡಬಹುದಾಗಿದೆ. ಇದು ಅಪಾಯದಲ್ಲಿರುವ ವ್ಯಕ್ತಿಗಳಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ನೀಡಲು ಸಹಕಾರಿಯಾಗುತ್ತದೆ.

ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆ, ಉಲ್ಲಂಘಿಸಿದರೆ ದಂಡ

ವಿಪತ್ತು ನಿರ್ವಹಣಾ ಅಧಿನಿಯಮ 2005ರ ಅಡಿಯಲ್ಲಿ ಹೊರಡಿಸಲಾದ ಈ ಮಾರ್ಗಸೂಚಿಗಳನ್ನು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಮಾರ್ಗಸೂಚಿಗಳನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಬಾರದು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು.

ಕ್ರಮಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಅಧಿನಿಯಮ 2005ರ 51ನೇ ಪ್ರಕರಣದಿಂದ 60ನೇ ಪ್ರಕರಣದವರೆಗಿನ ಉಪಬಂಧಗಳಡಿಯಲ್ಲಿ ಅಲ್ಲದೇ ಭಾರತ ದಂಡ ಸಂಹಿತೆಯ 188ನೇ ಪ್ರಕರಣದ ಅಡಿಯಲ್ಲಿ ಮತ್ತು ಅನ್ವಯವಾಗಬಹದಾದ ಇತರೆ ಕಾನೂನುಗಳಡಿಯಲ್ಲಿ ಆತನ/ಆಕೆಯ ವಿರುದ್ಧ ಕಾನೂನು ಕ್ರಮ ಜರಗಿಸಲು ಗುರಿಯಾಗುತ್ತಾರೆ.

ಕೆಳಕಂಡ ಕೋವಿಡ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸತಕ್ಕದ್ದು.

ಮುಖದ ಹೊದಿಕೆ : ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಅಗತ್ಯಾನುಸಾರ ಸರಿಯಾಗಿ ಮುಖದ ಹೊದಿಕೆಯನ್ನು ಧರಿಸದಿದ್ದಲ್ಲಿ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ರೂ 1,000 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ 500 ದಂಡ ವಿಧಿಸಲಾಗುವುದು.

ಸಾಮಾಜಿಕ ಅಂತರ: ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಟ 6 ಅಡಿ ಅಂತರವನ್ನು (2 ಗಜ ಅಂತರ) ಕಾಯ್ದುಕೊಳ್ಳಬೇಕು. ಗ್ರಾಹಕರಲ್ಲಿ ದೈಹಿಕ ಅಂತರ ಇರುವುದನ್ನು ಅಂಗಡಿಗಳ ಮಾಲಕರು ಖಚಿತಪಡಿಸಿಕೊಳ್ಳಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ಜುಲ್ಮಾನೆಯಿಂದ ದಂಡನೀಯವಾಗಿರುತ್ತದೆ. ಈ ಜುಲ್ಮಾನೆಯು ಸ್ಥಳೀಯ ಪ್ರಾಧಿಕಾರಗಳು ಕಾನೂನು, ನಿಯಮ ಮತ್ತು ನಿಬರ್ಂಧನೆಗಳಿಗೆ ಅನುಸಾರವಾಗಿ ನಿಗದಿಪಡಿಸಬಹುದಾದದಂತೆ ಇರಬೇಕಾಗಿದೆ.

ಕೆಲಸದ ಸ್ಥಳಗಳಲ್ಲಿ ಹೆಚ್ಚುವರಿ ನಿರ್ದೇಶನಗಳು ಮನೆಯಿಂದ ಕೆಲಸ  : ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯನ್ನು ಅನುಸರಿಸಬೇಕು.  ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ಧತಿಯನ್ನು ಅನುಸರಿಸಬೇಕಾಗಿದೆ. ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹಾಗೂ ಸಾಮಾನ್ಯ ಪ್ರದೇಶಗಳಲ್ಲಿ  ಥರ್ಮಲ್ ಸ್ಕ್ರೀನಿಂಗ್, ಕೈ ತೊಳೆಯುವುದಕ್ಕೆ ಮತ್ತು ಸ್ಯಾನಿಟೈಸರ್ ಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ನಿಯಮಿತ ಸ್ಯಾನಿಟೈಸೇಷನ್: ಕೆಲಸದ ಸಂಪೂರ್ಣ ಆವರಣ, ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ ಸಾಧನ ಸಲಕರಣೆಗಳನ್ನು ಆಗಾಗ್ಗೆ ನೈರ್ಮಲೀಕರಣ ಮಾಡತಕ್ಕದ್ದು. (ಉದಾ: ಬಾಗಿಲ ಹಿಡಿಕೆಗಳು, ಇತ್ಯಾದಿಗಳು) ಇದನ್ನು ಕೆಲಸದ ಪಾಳಿಯ ಮಧ್ಯದಲ್ಲಿ ಸಹ ಖಾತರಿಪಡಿಸಿಕೊಳ್ಳುವುದು.  ಕೆಲಸದ ಸ್ಥಳಗಳಲ್ಲಿ ಮೇಲ್ವಿಚಾರಣೆ ಹೊಂದಿರುವ ಎಲ್ಲಾ ವ್ಯಕ್ತಿಗಳು ಕೆಲಸಗಾರರ ನಡುವೆ ಸಾಕಷ್ಟು  ಅಂತರವನ್ನು, ಪಾಳಿಗಳ ನಡುವೆ, ಸಿಬ್ಬಂದಿಗಳ ಊಟದ ವಿರಾಮ ಇತ್ಯಾಧಿಗಳ ಸಂದರ್ಭದಲ್ಲಿ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.

ಮೇಲ್ಕಂಡ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸದೆ ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಅಂತವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 5 (3), 6(1) (2) ರನ್ವಯ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 57 ರನ್ವಯ ಕಾನೂನು ರೀತ್ಯಾ ಕ್ರಮ ಜರಗಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಮೇಲ್ಕಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಂಡ ಹೆಚ್ಚುವರಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ವ್ಯವಹಾರ ನಡೆಯುವ ಎಲ್ಲಾ ಹೋಟೆಲ್, ರೆಸ್ಟೋರೆಂಟ್‍ಗಳು ವಾಣಿಜ್ಯ ಸಂಕೀರ್ಣಗಳು, ಮಾಲ್‍ಗಳು, ಜನಸಂದಣಿ ಸೇರುವ ಪ್ರದೇಶಗಳಲ್ಲಿ, ಎಲ್ಲಾ ಅಂಗಡಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಪ್ರತಿಯೊಬ್ಬ ಅಂಗಡಿ ಮಾಲಿಕರು ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ನಿಯಮ ಉಲ್ಲಂಘನೆಯಾಗದಂತೆ ಸಾಕಷ್ಟು ಮುಂಜಾಗೃತಾ ಕ್ರಮವಹಿಸಿಕೋಳ್ಳಬೇಕು.  ನಗರ ಸ್ಥಳೀಯ ಸಂಸ್ಥೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ವರ್ತಕರು ತಮ್ಮ ಅಂಗಡಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಏಕಕಾಲದಲ್ಲಿ ಸೇರದಂತೆ ಅಂಗಡಿ ಮುಂಗಟ್ಟಿನ ಮುಂಭಾಗದಲ್ಲಿ ಕನಿಷ್ಟ 6ಘಿ6 ಅಡಿ ಅಂತರವನ್ನು ಗುರುತಿಸಿ ಗ್ರಾಹಕರಲ್ಲಿ ದೈಹಿಕ ಅಂತರ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.  ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ವರ್ತಕರು ತಮ್ಮ ಅಂಗಡಿ ಮುಂಗಟ್ಟಿನಲ್ಲಿ  ಮುಂದೆ ಇರುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಬಳಸಲ್ಪಡುವ ರಸ್ತೆಯನ್ನು ಹೊರತುಪಡಿಸಿ, ಉಳಿದ ಸ್ಥಳವನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಳಸಬಹುದಾಗಿದೆ.

ಪ್ರತಿ ಅಂಗಡಿ ಮಾಲಕರು ತಮ್ಮ ಅಂಗಡಿ ಮುಂಭಾಗದಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಗ್ರಾಹಕರನ್ನು ಸ್ಯಾನಿಟೈಸರ್ ಬಳಸಲು ಉತ್ತೇಜಿಸಬೇಕು. ಪ್ರತಿ ಅಂಗಡಿ ಮಾಲಕರು ಪ್ರತಿದಿನ ತಮ್ಮ ತಮ್ಮ ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ನಡೆಸುವುದಲ್ಲದೇ ಪ್ರತಿ ಮೂರು ದಿನಗಳಿಗೊಮ್ಮೆ ತಮ್ಮ ಅಂಗಡಿಗಳನ್ನು  ಸ್ಯಾನಿಟೈಸ್ ಮಾಡಲು ಕ್ರಮವಹಿಸಬೇಕಾಗಿದೆ.  ಅಂಗಡಿ ಮಾಲಕರು ತಮ್ಮ ಅಂಗಡಿ ಮುಂಭಾಗದಲ್ಲಿ ಓರ್ವ ಸಿಬ್ಬಂದಿಯನ್ನು ನಿಯೋಜಿಸಿ ದಿನನಿತ್ಯ ಗ್ರಾಹಕರನ್ನು ಥರ್ಮಲ್ ಸ್ಕಾನಿಂಗ್ ಮಾಡಿಸಬೇಕು. ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಹೆಸರು ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ರಿಜಿಸ್ಟರ್‍ನಲ್ಲಿ ನಮೂದಿಸಿ ತಮ್ಮ ವ್ಯಾಪ್ತಿಯ ಆರೋಗ್ಯಾಧಿಕಾರಿ ಹಾಗೂ ಮಹಾನಗರಪಾಲಿಕೆಗೆ ವರದಿ ನೀಡಬೇಕು.

ಜ್ವರದ ಲಕ್ಷಣಗಳುಳ್ಳ ಗ್ರಾಹಕರ ಕುರಿತು ವರದಿಯು ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಗೆ ಸ್ವೀಕೃತವಾದ ತಕ್ಷಣವೇ ಮಹಾನಗರ ಪಾಲಿಕೆಯಿಂದ/ ಜಿಲ್ಲಾಡಳಿತದ ವತಿಯಿಂದ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿ ಕೋವಿಡ್ ಲಕ್ಷಣಗಳುಳ್ಳ ವ್ಯಕಿಯನ್ನು ಕೋವಿಡ್ ಕೇರ್ ಸೆಂಟರ್‍ಗೆ ತಪಾಸಣೆಗೆ ಕಳುಹಿಸಲಾಗುವುದು. ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವ ಬಗ್ಗೆ, ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವ ಬಗ್ಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ ರೆಕಾಡಿರ್ಂಗ್ ಮಾಡುವುದು ಸಂಬಂಧಪಟ್ಟ ವರ್ತಕರ ಜವಾಬ್ದಾರಿಯಾಗಿರುತ್ತದೆ. ಸಿಸಿಟಿವಿ ರೆಕಾಡಿರ್ಂಗ್ ದಾಖಲೆಗಳನ್ನು ಸಂಬಂಧಪಟ್ಟ ಆರೋಗ್ಯ ಇಲಾಖಾಧಿಕಾರಿಗೆ ಹಾಗೂ ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ/ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು ಮೇಲ್ಕಂಡ ಅಧಿಕಾರಿಗಳು ಈ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಿ ಸಾಮಾಜಿಕ ಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದು/ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬಹುದಾಗಿದೆ.

ಘನತ್ಯಾಜ್ಯ ವಿಲೇವಾರಿ

ಪ್ರತಿ ಅಂಗಡಿಯಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ವಯ ವಿಲೇವಾರಿ ಮಾಡಲು ಕ್ರಮವಹಿಸಬೇಕು. ರಸ್ತೆಗಳಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ಕ್ರಮವಹಿಸಬೇಕು. ಉಲ್ಲಂಘಿಸಿದಲ್ಲಿ ಮೇಲೆ ತಿಳಿಸಿದ ನಿಯಮಗಳು, ಘನತ್ಯಾಜ್ಯ ನಿರ್ವಹಣೆ ನಿಯಮಗಳು ಹಾಗೂ ಮಹಾನಗರಪಾಲಿಕೆ ನಿಯಮಗಳಡಿಯಲ್ಲಿ ದಂಡ ವಿಧಿಸಲಾಗವುದು.

ಮೀನುಗಳನ್ನು ದೋಣಿ /ಮೀನುಗಾರಿಕಾ ಹಡಗುಗಳಿಂದ ಇಳಿಸುವ ಸಂದರ್ಭಗಳಲ್ಲಿ ಬಂದರು /ಜಟ್ಟಿಗಳಲ್ಲಿ  ಮೀನುಗಾರಿಕೆ ವ್ಯಾಪಾರದ ಸಂದರ್ಭಗಳಲ್ಲಿ ಅಲ್ಲಿ ಸೇರುವ ಜನಗಳು ಸಾಮಾಜಿಕ ಅಂತರವನ್ನು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ಉಪನಿರ್ದೇಶಕರು ಮೀನುಗಾರಿಕೆ ಇಲಾಖೆ, ದ.ಕ ಮಂಗಳೂರು ಹಾಗೂ ಬಂದರು ಅಧಿಕಾರಿಯವರು ಇದರ ಬಗ್ಗೆ ನಿಗಾವಹಿಸಿ ಸಂಬಂಧಪಟ್ಟವರಿಗೆ ಸೂಕ್ತ ತಿಳುವಳಿಕೆ ನೀಡಿ ಸರ್ಕಾರಿ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಮೀನುಗಾರಿಕೆ ವ್ಯಾಪಾರ/ ಹಣ್ಣು ಹಂಪಲು, ತರಕಾರಿ ಹಾಗೂ ಇತರೇ ವ್ಯಾಪಾರ ವಹಿವಾಟುಗಳ ನಡೆಸುವ ಸ್ಥಳಗಳಲ್ಲಿ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ/ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಪ್ರತಿನಿತ್ಯ ಸರ್ಕಾರಿ ಮಾರ್ಗಸೂಚಿಗಳನ್ನು ಸಾರ್ವಜನಿಕರು/ವರ್ತಕರು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಹಾಗೂ ಜಿಲ್ಲಾಡಳಿತದ ಗಮನ ತರಬೇಕು.
ಕೆ.ಎಸ್. ಆರ್. ಟಿ. ಸಿ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಪ್ಪದೇ ಮಾಸ್ಕ್‍ಗಳನ್ನು ಬಳಸಬೇಕು ಹಾಗೂ ಸರ್ಕಾರಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ಇದನ್ನು ಉಲ್ಲಂಘಿಸುವ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ  ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಜಿಲ್ಲೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸೂಕ್ತ ನಿರ್ದೇಶನ ನೀಡಬೇಕು.

ಬಸ್ಸು ಕಾರುಗಳ ಸಂಚಾರವಿದ್ದಾಗ:

ಖಾಸಗಿ ಬಸ್ ,ಆಟೋ, ಕ್ಯಾಬ್ ಇತ್ಯಾದಿ ವಾಹನಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಬಳಸಿ ಸಂಚರಿಸುವುದು. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಿ ಉಲ್ಲಂಘನೆಯಾದ್ದಲ್ಲಿ ವಾಹನದ ಮಾಲೀಕರಿಗೆ ದಂಡವನ್ನು ವಿಧಿಸಬೇಕು. ಪೊಲೀಸ್ ಇಲಾಖಾ ಅಧಿಕಾರಿಗಳು ಕೂಡಾ ತಮ್ಮ ಹಂತದಲ್ಲಿ ಆಗಿಂದಾಗ್ಗೆ ವಾಹನ ತಪಾಸಣೆ ಮಾಡಿ ಸರ್ಕಾರಿ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.

ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಸಾರ್ವಜನಿಕರು ಹಾಗೂ ವರ್ತಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಕೃಷಿ  ಉತ್ಪನಗಳನ್ನು ಸಾಗಾಣಿಕೆ /ವಾಹನಗಳಿಂದ ಇಳಿಸುವ ಇತ್ಯಾದಿ ಸಂದರ್ಭಗಳಲ್ಲಿ ಸರ್ಕಾರಿ ಮಾರ್ಗಸೂಚಿಗಳ ಉಲ್ಲಂಫನೆಯಾಗದಂತೆ ಎ.ಪಿ.ಎಂ.ಸಿ ಕಾರ್ಯದರ್ಶಿಯವರು ಅಗತ್ಯ ಕ್ರಮ ಜರುಗಿಸಿ ನಿಗಾವಹಿಸಬೇಕು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಹಾಗೂ ಎಲ್ಲೆಂದರಲ್ಲಿ ಉಗುಳದಂತೆ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ/ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಜನಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಇದನ್ನು ಉಲ್ಲಂಘಿಸುವ ಸಾರ್ವಜನಿಕರಿಗೆ ದಂಡವನ್ನು ವಿಧಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಾಜೇಂದ್ರ ಕೆ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕೊರೊನಾ ಮಾರ್ಗಸೂಚಿ ಕಟ್ಟುನಿಟ್ಟು: ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ಏನೇನಿದೆ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*