ವಿಟ್ಲ: ತ್ಯಾಗಪೂರ್ಣ ಸೇವೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಸಾಧ್ಯ. ಕಳೆದು ಹೋದುದರ ಬಗ್ಗೆ ಚಿಂತಿಸದೆ ಇದ್ದುದರಲ್ಲಿ ತೃಪ್ತಿಪಡುವ ಮನಸ್ಸು ನಮ್ಮದಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಶ್ರೀಗಳ ಷಷ್ಠ್ಯಬ್ದಿ ಆಚರಣೆ ಹಿನ್ನೆಲೆಯಲ್ಲಿ ನಡೆದ ಭಕ್ತಾಧಿಗಳ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಯಾವುದೇ ಒಂದು ಕಾರ್ಯಕ್ರಮವನ್ನು ನಾವು ಮಾಡಿದಾಗ ಅದು ಸಮಾಜಮುಖಿಯಾಗಿರಬೇಕು ಮಾತ್ರವಲ್ಲದೆ ಅದೊಂದು ನೆನಪಿನ ಬುತ್ತಿಯಾಗಬೇಕು. ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮ ಯಶಸ್ಸಾಗುತ್ತದೆ. ಈ ಷಷ್ಠ್ಯಬ್ದ ಕಾರ್ಯಕ್ರಮ ಹಲವಾರು ಸಮಾಜಮುಖಿ ಚಿಂತನೆಗಳಿಂದ ಕೂಡಿದೆ. ಇದೀಗಾಗಲೆ ಕೇಂದ್ರ ಸಮಿತಿಯನ್ನು ರಚನೆ ಮಾಡಲಾಗಿದೆ. ಮುಂದಿನದಿನಗಳಲ್ಲಿ ತಾಲೂಕಿನಲ್ಲಿ ಹಾಗೂ ಗ್ರಾಮಗಳಲ್ಲಿ ಸಮಿತಿಗಳನ್ನು ರಚನೆ ಮಾಡುವ ಇರಾದೆ ಇದೆ. ನಾವು ಮಾಡಿದ ಕಾರ್ಯಕ್ರಮ ಆದರ್ಶಪೂರ್ಣ, ಅರ್ಥ ಪೂರ್ಣ, ಸಮಾಜಮುಖಿ ಚಿಂತನೆಯನ್ನೊಳಗೊಂಡಿರಬೇಕಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಸಾಧ್ವಿ ಮಾತಾನಂದಮಯಿಯವರು ಆಶೀರ್ವಚನ ನೀಡಿ ಸಮಾಜದ ಋಣ ಸಂತನಿಗಿದೆ. ಸಂತನ ಹೃಣ ಸಮಾಜಕ್ಕಿದೆ. ನನಗಾಗಿ ಏನನ್ನು ಮಾಡಬೇಡಿ, ಸಮಾಜಕ್ಕಾಗಿ ಏನಾದರೂ ಕೊಡುಗೆಗಳನ್ನು ಕೊಡಿ ಎನ್ನುವುದು ಶ್ರೀಗಳ ಜೀವನ ಸಂದೇಶವಾಗಿದೆ. ಶ್ರೀಗಳ ಷಷ್ಠ್ಯಬ್ದಿ ಕಾರ್ಯಕ್ರಮವನ್ನು ಜ್ಞಾನವಾಹಿನಿ ಎಂಬ ಹೆಸರಿನಿಂದ ಆಚರಣೆಯಾಗಲಿದೆ. ಇದಕ್ಕಾಗಿ ಎಲ್ಲರೂ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗಿಳಿಸ ಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿರುವ ಡಾ. ಎಂ.ಮೋಹನ ಆಳ್ವರವರು ಮಾತನಾಡಿ ಒಡಿಯೂರು ಶ್ರೀಗಳು ಪ್ರೀತಿಯ ಪ್ರತೀಕವಾಗಿದ್ದು ಎಲ್ಲರಿಗೂ ಸುಲಭವಾಗಿ ಸಿಗುವ ಸ್ವಾಮೀಜಿಯಾಗಿದ್ದು, ಕಷ್ಟದಲ್ಲಿ ಬಂದವರ ಅಳಳನ್ನು ಸಮಯಚಿತ್ತದಿಂದ ಆಲಿಸುವ ಆದರ್ಶಮಯಿಯಾಗಿದ್ದಾರೆ. ಸಮಾಜ ಪ್ರೀತಿ, ವ್ಯಕ್ತಿ ಪ್ರೀತಿಯ ಜೊತೆಗೆ ವನಪ್ರೀತಿಯೂ ಅವರಲ್ಲಿದೆ. ಅವರ ಷಷ್ಠ್ಯಬ್ದಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವಿಟ್ಲ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಚಂದ್ರಹಾಸ ರೈ, ಸಿಎ ರಾಮೋಹನ್ ರೈ, ಚಂದ್ರಶೇಖರ ಉಪಾಧ್ಯಾಯ, ಹಿರಣ್ಯ ವೆಂಕಟೇಶ್ವರ ಭಟ್, ಕಿರಣ್ ಯು., ಸರ್ವಾಣಿ ಪಿ. ಶೆಟ್ಟಿ, ಅಶೋಕ್ ಕುಮಾರ್ ಬಿಜೈ, ಕೆ. ಪಿ. ರಘುರಾಮ ಶೆಟ್ಟಿ, ರಘುನಾಥ ಶೆಟ್ಟಿ ಪಟ್ಲಗುತ್ತು, ಪಟ್ಲ ಮಹಾಬಲ ಶೆಟ್ಟಿ, ಶ್ರೀಧರ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಎ. ಸುರೇಶ್ ರೈ ಸ್ವಾಗತಿಸಿದರು. ನವನೀತ ಶೆಟ್ಟಿ ಕದ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಪತಿ ಭಟ್ ಸೇರಾಜೆ ವಂದಿಸಿದರು.
Be the first to comment on "ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಆಚರಣೆ: ಸಮಾಲೋಚನಾ ಸಭೆ"